

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಮಾ.26) ಬೆಳಗ್ಗೆ 36 ಒನ್ವೆಬ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಭಾರತದ ಅತ್ಯಂತ ಭಾರದ ಉಡಾವಣಾ ನೌಕೆ ಲಾಂಚ್ ವೆಹಿಕಲ್ ಮಾರ್ಕ್ 3 (ಎಲ್ವಿಎಂ-3) ಈ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್-ಎಲ್ಇಒ) ಕೊಂಡೊಯ್ಯಿತು.
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಉಡಾವಣೆಯೊಂದಿಗೆ, ಭೂಮಿಯ ಸುತ್ತ 648 ಉಪಗ್ರಹಗಳ ಗುಚ್ಛವನ್ನು ಹಾರಿಸುವ ಯುಕೆ ಕಂಪನಿಯ ಮಿಷನ್ ಪೂರ್ಣಗೊಂಡಿದೆ.
ಉಪಗ್ರಹಗಳನ್ನು ವಿಮಾನಗಳಂತೆ ತಲಾ 12ರ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳು ಭೂಮಿಯಿಂದ 1,200 ಕಿಲೋಮೀಟರ್ ಎತ್ತರದಲ್ಲಿ ಕಾರ್ಯಾಚರಿಸಲಿವೆ. ಈ ವಿಮಾನಗಳನ್ನು ತಲಾ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಬಿಡಲಾಗುತ್ತದೆ. ಒಂದಕ್ಕೊಂದು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದು ಅದರ ಉದ್ದೇಶವಾಗಿದೆ.
ಬ್ರಾಡ್ಬ್ಯಾಂಡ್ ಸಂಪರ್ಕ
ಒನ್ವೆಬ್ ಗುಚ್ಛವು ಭೂಮಿಯ ಸುತ್ತ ಸುತ್ತುವ ಉಪಗ್ರಹಗಳ ಒಂದು ಜಾಲವಾಗಿದೆ. ಜಗತ್ತಿನಾದ್ಯಂತ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಯುಕೆ ಕಂಪನಿಯು ಉಪಗ್ರಹಗಳ ಎಲ್ಇಒ ಗುಚ್ಛ ಅನುಷ್ಠಾನದ ಹೊಣೆ ಹೊತ್ತಿದೆ. (ಏಜೆನ್ಸೀಸ್)