

ಇಸ್ರೇಲ್: ಈ ಬಾರಿಯ ನೊಬೆಲ್ ಪ್ರಶಸ್ತಿ ತಮಗೆ ಬರಲಿದೆ ಎಂಬ ಅಪಾರ ನಿರೀಕ್ಷೆಯಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ (Donald Trump) ಆ ಅವಾರ್ಡ್ ಸಿಗದೆ ಭಾರೀ ಮುಖಭಂಗವೇ ಉಂಟಾಯಿತು. ಆದರೆ, ಇದಕ್ಕೆ ಪರ್ಯಾಯ ಎಂಬಂತೆ ಇದೀಗ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು, ಟ್ರಂಪ್ ಅವರಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಆನರ್ ಅನ್ನು ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಟ್ರಂಪ್ ಅವರು ನೆಸ್ಸೆಟ್ನಲ್ಲಿ (ಇಸ್ರೇಲ್ ಸಂಸತ್ತು) ಭಾಷಣ ಮಾಡುವ ಮುಂಚಿತವಾಗಿಯೇ ಈ ಘೋಷಣೆ ಹೊರಬಿದ್ದಿರುವುದು ಗಮನಾರ್ಹ. ಗಾಜಾದಿಂದ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಮತ್ತು ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಟ್ರಂಪ್ರ ಪಾತ್ರ ಮಹತ್ವದ್ದು. ಇದರೊಟ್ಟಿಗೆ ಮಧ್ಯಪ್ರಾಚ್ಯದಲ್ಲಿ ಭದ್ರತೆ, ಸಹಕಾರ ಮತ್ತು ಶಾಂತಿಯ ಹೊಸ ಯುಗಕ್ಕೆ ಅಡಿಪಾಯ ಹಾಕಿದ್ದಾರೆ. ಹೀಗಾಗಿಯೇ ಅವರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದಾಗಿ ಇಸ್ರೇಲ್ ಅಧ್ಯಕ್ಷ ಹೆರ್ಜಾಗ್ ಅವರ ಕಚೇರಿ ಮಾಹಿತಿ ಹಂಚಿಕೊಂಡಿದೆ.
2013ರಲ್ಲಿ ಇಸ್ರೇಲ್ ಈ ಪ್ರಶಸ್ತಿಯನ್ನು ಮಾಜಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡಿತು. ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುವ ಮೊದಲು, ಟ್ರಂಪ್ ಇದನ್ನು ಪಡೆಯಬಹುದು ಎಂಬ ಊಹಾಪೋಹಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿತ್ತು. ಅಂತೆಯೇ, ವದಂತಿ ವದಂತಿಯಾಗಿಯೇ ಉಳಿದಿದ್ದು ಯುಎಸ್ ಅಧ್ಯಕ್ಷರಲ್ಲಿ ನಿರಾಸೆ ಮೂಡಿಸಿತ್ತು. ಸದ್ಯ ಟ್ರಂಪ್ ಅವರ ಪ್ರಸ್ತಾವಿತ ಶಾಂತಿ ಯೋಜನೆಯ ಮೊದಲ ಹಂತದ ಭಾಗವಾಗಿ ಇಸ್ರೇಲ್ ಮತ್ತು ಹಮಾಸ್ ಸೋಮವಾರ ಕೈದಿಗಳನ್ನು ವಿನಿಮಯ ಮಾಡಿಕೊಂಡವು. ಇಸ್ರೇಲ್ ದಾಳಿಯಲ್ಲಿ ಇಲ್ಲಿಯವರೆಗೆ 67,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಮಗೆ ನೀಡಬೇಕೆಂದು ಟ್ರಂಪ್ ಬಯಸಿದ್ದರು. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ವಿಶ್ವದಲ್ಲಿ ಪ್ರಸ್ತುತ ಅನೇಕ ದೇಶಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಅದನ್ನು ತಿಳಿಗೊಳಿಸುವ ಪ್ರಯತ್ನವನ್ನು ಟ್ರಂಪ್ ಮಾಡುತ್ತಿದ್ದಾರೆ. ಈ ಹಾದಿಯಲ್ಲಿ ಅವರು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ನಾನೇ ನಿಲ್ಲಿಸಿದೇ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಇಸ್ರೇಲ್-ಗಾಜಾ ನಡುವೆ ವರ್ಷಗಳಿಂದ ನಡೆಯುತ್ತಿರುವ ಸಂಘರ್ಷ ಕೆಲವು ದಿನಗಳ ಹಿಂದಷ್ಟೇ ಕೊನೆಗೊಂಡಿದ್ದು, ಇದಕ್ಕೂ ನಾನೇ ಕಾರಣ ಅನ್ನೋದು ಟ್ರಂಪ್ ಅವರ ವಾದ. ಇದಿಷ್ಟೇ ಅಲ್ಲದೆ, ಭಾರತದಲ್ಲಿ ಕಾಶ್ಮೀರದ ಪಹಲ್ಗಾಮ್ನಲ್ಲಿ ಈ ವರ್ಷ ಏಪ್ರಿಲ್ 22ರಂದು ಉಗ್ರರು ದಾಳಿ ನಡೆಸಿದರು. ಇದರಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡರು. ಬಳಿಕ ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ನೂರಾರು ಉಗ್ರರನ್ನು ಸೆದೆಬಡಿಯಿತು.
ಈ ವೇಳೆ ಪಾಕ್ ನೆಲದಲ್ಲಿದ್ದ ಉಗ್ರರ ತಾಣಗಳನ್ನು ತನ್ನ ನೆಲದಿಂದಲೇ ನಿಖರ ದಾಳಿಯ ಮೂಲಕ ಭಾರತೀಯ ಸೇನೆ ಉಡಾಯಿಸಿತು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ಉಂಟಾಯಿತು. ಕೆಲ ದಿನಗಳವರೆಗೆ ಉಭಯ ದೇಶಗಳು ಪರಸ್ಪರ ದಾಳಿಯಲ್ಲಿ ತೊಡಗಿದವು. ಬಳಿಕ ಕದನ ವಿರಾಮ ಘೋಷಣೆ ಮಾಡಿದವು. ಇದಕ್ಕೂ ನಾನೇ ಕಾರಣ ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಇದು ಕೂಡ ಬಹಳ ಚರ್ಚೆಯಾಗಿತ್ತು. ಆದರೆ, ಟ್ರಂಪ್ ವಾದವನ್ನು ಭಾರತ ತಿರಸ್ಕರಿಸಿದೆ. ಈ ಕಾರಣಕ್ಕೆ ಟ್ರಂಪ್ ಭಾರತದ ವಿರುದ್ಧ ಸುಂಕ ಸಮರವನ್ನು ಸಾರಿದ್ದಾರೆ. ಇದಿಷ್ಟೇ ಅಲ್ಲದೆ, ಟ್ರಂಪ್ ಅವರು ರಷ್ಯಾ ಮತ್ತು ಯೂಕ್ರೇನ್ ನಡುವೆ ತುಂಬಾ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಯುದ್ಧವನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಇದರ ಭಾಗವಾಗಿ ಉಭಯ ದೇಶಗಳ ನಾಯಕರ ಜೊತೆ ಈಗಾಗಲೇ ಮಾತುಕತೆಯನ್ನು ಸಹ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಕಾರಣದಿಂದ ತನಗೆ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕೆಂದು ಟ್ರಂಪ್ ಬಯಸಿದ್ದರು. ತಮ್ಮನ್ನು ತಾವು ಶಾಂತಿದೂತ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಆದರೆ, ಆ ನಿರೀಕ್ಷೆಗಳೆಲ್ಲವೂ ಇಂದು ಹುಸಿಯಾಯಿತು,(ಏಜೆನ್ಸೀಸ್).