ಮದುವೆ ಸಂಭ್ರಮಕ್ಕೆ ಸಂಘರ್ಷ ಅಡ್ಡಿ! ಪುತ್ರನ ವಿಚಾರದಲ್ಲಿ ಬಹುದೊಡ್ಡ ನಿರ್ಧಾರ ಕೈಗೊಂಡ ಇಸ್ರೇಲ್ ಪ್ರಧಾನಿ | Israel

ವಿಜಯವಾಣಿ (36)
Published on

Israel PM: ದಾಳಿಗೆ ಪ್ರತಿದಾಳಿ ಎನ್ನುವಂತೆ ಪ್ರತೀಕಾರದ ಕಿಚ್ಚನ್ನು ಜ್ವಾಲೆಯಾಗಿ ಹಬ್ಬಿಸುತ್ತಿರುವ ಇಸ್ರೇಲ್ ಮತ್ತು ಇರಾನ್ ದೇಶಗಳು, ಸದ್ಯ ದೊಡ್ಡ ಸಂಘರ್ಷಕ್ಕೆ ಕಾರಣವಾಗಿವೆ. ಸದ್ಯ ಎರಡೂ ರಾಷ್ಟ್ರಗಳ ನಡುವೆ ಭೀಕರ ಯುದ್ಧದ ಭೀತಿ ಎದುರಾಗಿದೆ.

ಇರಾನ್​ನ ಹಲವು ಸೇನಾ ಅಧಿಕಾರಿಗಳು, ಮಿಲಿಟರಿ ನೆಲೆಗಳು, ಪರಮಾಣು ವಿಜ್ಞಾನಿಗಳು ಮತ್ತು ಸೇನಾ ಮುಖ್ಯಸ್ಥರನ್ನು ಧ್ವಂಸಗೊಳಿಸಿರುವ ಇಸ್ರೇಲ್, ಕ್ಷಿಪಣಿ ದಾಳಿಯನ್ನು ಮುಂದುವರಿಸಿದೆ. ಮತ್ತೊಂದೆಡೆ, ತನ್ನ ಬಹುಮುಖ್ಯ ಮಿಲಿಟರಿ ಅಧಿಕಾರಿಗಳು, ನೆಲೆಗಳು, ಶಸ್ತ್ರಾಸ್ತ್ರಗಳನ್ನು ಕಳೆದುಕೊಂಡು ದೊಡ್ಡ ನಷ್ಟವನ್ನು ಅನುಭವಿಸುತ್ತಿರುವ ಇರಾನ್​, ಶನಿವಾರ ರಾತ್ರಿಯಿಂದಲೇ ಸೇಡಿನ ಬಿಸಿಯನ್ನು ಇಸ್ರೇಲ್​ಗೆ ಮುಟ್ಟಿಸಿದೆ.

ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿ ನೂರಾರು ಡ್ರೋನ್‌ ಮತ್ತು ಕ್ಷಿಪಣಿಗಳ ಪ್ರತೀಕಾರ ತೀರಿಸಿಕೊಂಡಿರುವ ಇರಾನ್ ಸೇನೆ, ಇಸ್ರೇಲ್​ನ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಸುಮಾರು 10ಕ್ಕೂ ಹೆಚ್ಚು ಜನರ ಜೀವವನ್ನು ಬಲಿ ಪಡೆದಿದೆ. ಸದ್ಯ ಎರಡೂ ದೇಶಗಳ ನಡುವೆ ಸಂಘರ್ಷ ಭುಗಿಲೆದ್ದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಪ್ರಮುಖ ಹಾಗೂ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆಯೇ ನಿಗದಿಯಾಗಿದ್ದ ಪುತ್ರನ ವಿವಾಹ ಸಮಾರಂಭವನ್ನು ಯುದ್ಧ ಭೀತಿಯಿಂದ ಮುಂದೂಡಿದ್ದಾರೆ. ಇಸ್ರೇಲ್ ಪ್ರಧಾನಿ ಅವರ ಪುತ್ರ ಅವ್ನರ್ ನೆತನ್ಯಾಹು, ಅಮಿತ್ ಯಾರ್ಡೆನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಆದ್ರೆ, ದೇಶದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮದುವೆ ಸಮಾರಂಭ ನಡೆಸಿದರೆ ಅದು ಸರಿಯಿರುವುದಿಲ್ಲ ಎಂದು ಭಾವಿಸಿರುವ ಪ್ರಧಾನಿಗಳು, ಪುತ್ರನ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಬಹಿರಂಗಪಡಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net