

ಬೆಂಗಳೂರು: ಈ ಲಾಕ್ಡೌನ್ ಸಮಯದಲ್ಲಿ ನಾನು ಜಾಸ್ತಿ ಸಿನಿಮಾ ನೋಡಿಲ್ಲ. ‘ಪ್ಯಾರಸೈಟ್’ ಮತ್ತು ‘ಗಲ್ಲಿ ಬಾಯ್’ ನೋಡಿದೆ. ‘ಪ್ಯಾರ ಸೈಟ್’ ಬಗ್ಗೆ ಸಾಕಷ್ಟು ಜನ ಮಾತಾಡಿದ್ದಾರೆ. ಇನ್ನು ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ‘ಗಲ್ಲಿ ಬಾಯ್’ ಬಗ್ಗೆ ಬೇರೆ ತರಹ ನಿರೀಕ್ಷೆ ಇತ್ತು. ರ್ಯಾಪರ್ ಕುರಿತಾದ ಚಿತ್ರವಾದ್ದರಿಂದ, ಸಾಕಷ್ಟು ಹಾಡುಗಳಿರಬಹುದು, ರ್ಯಾಪ್ ಜಾಸ್ತಿ ಇರಬಹುದು ಎಂದುಕೊಂಡಿದ್ದೆ. ಆ ಸಿನಿಮಾ ಬಗ್ಗೆ ನನಗೆ ಹೆಚ್ಚು ನಿರೀಕ್ಷೆಗಳಿರಲಿಲ್ಲ. ಆದರೆ, ಸಿನಿಮಾ ಬಹಳ ಎಮೋಷನಲ್ ಆಗಿದೆ. ಸಾಮಾನ್ಯವಾಗಿ ಸಿನಿಮಾ ನೋಡುವಾಗ ನಾನು ಜಾಸ್ತಿ ಅಳುವುದಿಲ್ಲ. ಈ ಸಿನಿಮಾ ನೋಡುವಾಗ ಅತ್ತೆ. ರ್ಯಾಪ್ ಅನ್ನೋದನ್ನ ಈ ಚಿತ್ರದಲ್ಲಿ ಬೇರೆ ರೀತಿಯೇ ತೋರಿಸಿದ್ದಾರೆ. ರ್ಯಾಪ್ ಸಹ ಕಾವ್ಯದ ಇನ್ನೊಂದು ಭಾಗ ಅಂತ ಈ ಸಿನಿಮಾದಲ್ಲಿ ಹೇಳಲಾಗಿದೆ. ರ್ಯಾಪ್ನ ಬಿಟ್ಟು, ಬಡತನ ಸೇರಿದಂತೆ ಹಲವು ವಿಷಯಗಳನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ. ಹಾಗಾಗಿ ಈ ಸಿನಿಮಾ ಬಹಳ ಇಷ್ಟ ಆಯಿತು. ಚಿತ್ರದ ಬಿಡುಗಡೆಯಾದಾಗ ತುಂಬಾ ಹೈಪ್ ಇತ್ತು. ಆ ಹೈಪ್ಗೆ ತಕ್ಕ ಹಾಗೆ ಸಿನಿಮಾ ಮೂಡಿ ಬಂದಿದೆ.
| ಐಶಾನಿ ಶೆಟ್ಟಿ
ತುಂಬಾಡ್
ಮಾನವನ ಆಸೆ ದುರಾಸೆಯಾದಾಗ ಅವನ ಅವನತಿಗೆ ಕಾರಣವಾಗುತ್ತದೆ. 2018ರಲ್ಲಿ ತೆರೆ ಕಂಡ ಹಿಂದಿ ಚಲನಚಿತ್ರ ‘ತುಂಬಾಡ್’ ಪ್ರೇಕ್ಷಕರಿಗೆ ನೀಡುವ ಸಂದೇಶ ಇದು. ಸೋಹಂ ಶಾಹ್ ಅಭಿನಯದ ಈ ಚಿತ್ರವು ಮಹಾರಾಷ್ಟ್ರದ ಶ್ರೀಪದ್ ನಾರಾಯಣ ಪೆಂಡ್ಸೆಯವರ ‘ತುಂಬಾಡ್ಚೆ ಖೋಟ್’ ಕಾದಂಬರಿಯನ್ನಾಧರಿಸಿದೆ. ಸಿನಿಮಾ ಪ್ರಿಯರನ್ನು ಸ್ವಾತಂತ್ರ್ಯ ಪೂರ್ವ ಭಾರತಕ್ಕೆ ಕೊಂಡೊಯ್ಯುವ ಈ ಚಿತ್ರವು, ನಿಧಿಯ ಹುಡುಕಾಟದ ಸುತ್ತ ಸುತ್ತುತ್ತದೆ. ಕದ್ದ ಚಿನ್ನದ ನಾಣ್ಯಗಳಿಂದ ಬರುವ ಸಿರಿವಂತಿಕೆ, ಸಿರಿವಂತಿಕೆ ಬೆಳೆದೊಡನೆ, ಬೆಳೆಯುವ ದುರ್ನಡತೆ, ಅದರಿಂದಾಗುವ ಅನಾಹುತ ... ಇದೇ ಈ ಸಿನಿಮಾದ ಕಥೆ. ಒಟ್ಟಿನಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಈ ಚಿತ್ರ ಎಲ್ಲರೂ ನೋಡಲೇಬೇಕಾದ ಚಿತ್ರ ಎಂದು ಹೇಳಬಹುದು.
| ಚಿಂತನ್ ಆಯನೂರು