

ಚಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ವೆಸ್ಟ್ ಇಂಡೀಸ್ನ ಸ್ಫೋಟಕ್ ಬ್ಯಾಟ್ಸ್ಮನ್ ಕ್ರಿಸ್ಗೇಲ್ ದಾಖಲೆ ಹಿನ್ನಲೆಗೆ ಸರಿದಿದೆ.
ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶಾನ್ ನೋಡ ನೋಡುತ್ತಿದ್ದಂತೆ ಕ್ರಿಸ್ ಕಚ್ಚಿ ನಿಂತರು. ಬಾಂಗ್ಲಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಇದರೊಂದಿಗೆ ತಮ್ಮ ಮೊದಲ ಏಕದಿನ ಶತಕ ದಾಖಲಿಸಿದರು. ಶತಕ ಸಿಡಿಸಿದ ನಂತರವೂ ಅದೇ ಅಬ್ಬರದಲ್ಲಿ ಇಶಾನ್ ಕಿಶಾನ್ ಬ್ಯಾಟ್ ಬೀಸಿದರು. ಬಾಂಗ್ಲಾ ಬೌಲರ್ಗಳು ಎಷ್ಟೇ ಪ್ರಯತ್ನ ಪಟ್ಟರೂ ಇಶಾನ್ ಮಾತ್ರ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಾ ದ್ವಿಶತಕದತ್ತ ಸಾಗಿದರು.
ಬಾಂಗ್ಲಾ ಆಟಗಾರರ ಬೆವರಿಳಿಸಿದ ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲಿ 24 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ದ್ವಿಶತಕ ಸಿಡಿಸಿ ಮಿಂಚಿದರು. ಈ ಮೂಲಕ ಅತೀ ವೇಗವಾಗಿ ದ್ವಿಶತಕ ದಾಖಲಿಸಿದ ಆಟಗಾರ ಎಂಬ ದಾಖಲೆಯನ್ನು ಇಶಾನ್ ಕಿಶನ್ ತಮ್ಮ ಹೆಸರಿಗೆ ನೋಂದಾಯಿಸಿಕೊಂಡರು.
ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ 2015ರ ಐಸಿಸಿ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದರು. ಆದರೆ ಇಶಾನ್ ಕಿಶನ್ 126 ಎಸೆತಗಳಲ್ಲಿ ದ್ವಿಶತಕ ದಾಖಲಿಸುವುದರೊಂದಿಗೆ ಗೇಲ್ ದಾಖಲೆಯನ್ನು ಮುರಿದಿದ್ದಾರೆ. ಜತೆಗೆ ದ್ವಿಶತಕ ಸಿಡಿಸಿದ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಇಶಾನ್ ಕಿಶನ್ ಪಾತ್ರಾರಾಗಿದ್ದಾರೆ. (ಏಜೆನ್ಸೀಸ್)