ಭೂಕಂಪನಕ್ಕೆ ಮಳೆಯೇ ಕಾರಣವಾಯಿತಾ? ತಜ್ಞರ ತಂಡ ಪರಿಶೀಲಿಸಿದ್ದೇನು? ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ಅಧಿಕಾರಿಗಳು ಬಿಚ್ಚಿಟ್ಟ ಮಾಹಿತಿ ಇಲ್ಲಿದೆ...!

1661525927649
Published on

ವಿಜಯಪುರ: ಬರ ಪೀಡಿತ ಜಿಲ್ಲೆ, ಬಿಸಿಲೂರು ಎಂದೆಲ್ಲಾ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಗೆ ಹೆಚ್ಚಿದ ಮಳೆಯೇ ಶಾಪವಾಯಿತೇ? ಹೆಚ್ಚುತ್ತಿರುವ ಭೂಕಂಪನಕ್ಕೆ ಮಳೆಯೇ ಕಾರಣವಾ? ಅಂತರ್ಜಲ ಹೆಚ್ಚಳದಿಂದ ಅದರುತ್ತಿವೆಯಾ ಕಲ್ಲಿನ ಪದರುಗಳು...?

ಹೀಗೆ ಸಾಲು ಸಾಲು ಪ್ರಶ್ನೆಗಳು ಹುಟ್ಟಿಕೊಳ್ಳಲ ಕಾರಣ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡದ ತಾತ್ಕಾಲಿಕ ಊಹೆ.

ಕಲಬುರಗಿ, ಬೀದರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಕಂಡು ಬಂದ ಭೂಕಂಪನದ ಕಾರಣಕ್ಕೆ ಇಂಥದ್ದೇ ತರ್ಕ ವ್ಯಕ್ತವಾಗಿದ್ದು, ಸದ್ಯಕ್ಕೆ ವಿಜಯಪುರಕ್ಕೂ ಇದು ಅನ್ವಯವಾಗಲಿದೆ. ಹಾಗಂತ ಇದೇ ಅಂತಿಮ ತೀರ್ಮಾನವಲ್ಲ ಎಂದು ಹಿರಿಯ ವೈಜ್ಞಾನಿಕ ಅಧಿಕಾರಿ ಜಗದೀಶ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ 2018-19ರಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ಮಳೆಗಾಲ ಸಮಯದಲ್ಲಿಯೇ ಹೆಚ್ಚಾಗಿ ಭೂಕಂಪನವಾಗುತ್ತಿದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ಸಮಯದಲ್ಲೂ ಆಗಿದೆ. ಆದರೆ, ಹೆಚ್ಚಾಗಿ ಆಗಿರುವುದು ಮಳೆಗಾಲದ ಸಮಯದಲ್ಲಿಯೇ. ಈ ಭಾಗ ಬರಪೀಡಿತವಾಗಿದೆ. ಹೀಗಾಗಿ ಮಳೆ ಪ್ರಮಾಣ ಹೆಚ್ಚಾದಾಗ ಒಣ ಪ್ರದೇಶದಲ್ಲಿ ನೀರು ನುಗ್ಗುವುದರಿಂದ ಕಲ್ಲಿನ ಪದರುಗಳು ಅಲುಗಾಡುತ್ತವೆ. ದೊಡ್ಡ ಶಬ್ದ ಹೊರಹೊಮ್ಮಿ ಕಂಪನ ಸೃಷ್ಠಿಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಗಮನಿಸಿದಾಗ ಭೂಮಿಯ 5-10 ಕಿಮೀ ಆಳದಲ್ಲಿ ಈ ಪ್ರಕ್ರಿಯೆ ನಡೆದಿದೆ. ಹೀಗಾಗಿ ಸದ್ಯಕ್ಕೆ ಮಳೆಯೇ ಕಾರಣ ಎಂಬ ತಾತ್ಕಾಲಿಕ ತೀರ್ಮಾನಕ್ಕೆ ಬರಲಾಗಿದೆ. ಅಧ್ಯಯನದ ಬಳಿಕ ನಿಖರ ಅಂಶ ತಿಳಿದು ಬರಲಿದೆ ಎಂದು ಅವರು ತಿಳಿಸಿದರು.

ಭೂಕಂಪನಕ್ಕೆ ಆಲಮಟ್ಟಿ ಜಲಾಶಯವಾಗಲಿ, ಎನ್‌ಟಿಪಿಸಿ ಆಗಲಿ ಕಾರಣವಲ್ಲ. ಎನ್‌ಟಿಪಿಸಿ ಕೇವಲ ವಿಜಯಪುರದಲ್ಲಿಲ್ಲ ದೇಶದ ವಿವಿಧ ಭಾಗಗಳಲ್ಲಿ ಇದೆ. ಹಾಗೆ ನೋಡಿದರೆ ಎನ್‌ಟಿಪಿಸಿ ಇರುವ ಜಾಗದಲ್ಲೆಲ್ಲ ಭೂಕಂಪನ ಆಗಬೇಕಿತ್ತು. ಹೀಗಾಗಿ ಭೂಕಂಪಕ್ಕೆ ಎನ್‌ಟಿಪಿಸಿ ಕಾರಣ ಅಲ್ಲ ಎಂದು ಗೊಂದಲಕ್ಕೆ ತೆರೆ ಎಳೆದರು.

ಆಲಮಟ್ಟಿ ಜಲಾಶಯದಲ್ಲಿ ಭೂಕಂಪನ ಅಳತೆ ಮಾಪನ ಇದ್ದು ಅದರಲ್ಲಿ 2.5 ಕ್ಕಿಂತ ಹೆಚ್ಚು ತೀವ್ರತೆ ಮಾತ್ರ ದಾಖಲಾಗಲಿದೆ. ಅದಕ್ಕಿಂತ ಕಡಿಮೆ ತೀವ್ರತೆ ಇದ್ದರೆ ತೀವ್ರತೆ ದಾಖಲಾಗಲ್ಲ. ಹೀಗಾಗಿ ಕ್ಲೋಸ್ ಮಾನಿಟರಿಂಗ್ ಮಾಡಬೇಕಾದರೆ ಪರ್ಯಾಯ ಕೇಂದ್ರದ ಅವಶ್ಯಕತೆ ಇದ್ದು ಈಗಾಗಲೇ ಉಕ್ಕಲಿಯಲ್ಲೊಂದು ತಾತ್ಕಾಲಿಕ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರದಿಂದ ಬಂದ ದತ್ತಾಂಶ ಸಂಗ್ರಹಿಸಿ ಪ್ರಾಥಮಿಕ ವರದಿ ಸಲ್ಲಿಸಲಾಗುವುದು. ಬಳಿಕ ಕೇಂದ್ರದ ವಿಶೇಷ ತಂಡ ಆಗಮಿಸಲಿದೆ ಎಂದು ಜಗದೀಶ ತಿಳಿಸಿದರು.

ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಎಚ್.ಡಿ. ಆನಂದಕುಮಾರ, ಕಿರಿಯ ವೈಜ್ಞಾನಿಕ ಅಧಿಕಾರಿ ರಮೇಶ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net