ಜಗಜೀವನ್ ರಾಂ ಭವನಕ್ಕೆ ಕಾಯಕಲ್ಪ ಎಂದು?

gan-4
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಬಾಬು ಜಗಜೀವನ್ ರಾಮ್ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿ

ಐದು ವರ್ಷ ಕಳೆದರೂ ಇನ್ನೂ ಉದ್ಘಾಟನಾ ಭಾಗ್ಯ ಕೂಡಿಬಂದಿಲ್ಲ.

ಗುಜ್ಜಾಡಿ ಗ್ರಾಪಂ ಕಚೇರಿ ಸಮೀಪದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ಅಂದಿನ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದ್ದರು. ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣದ ಗುತ್ತಿಗೆ ನೀಡಲಾಗಿತ್ತು. ಶಿಲಾನ್ಯಾಸ ನಡೆದ ದಿನದಿಂದ ಇಲ್ಲಿಯವರೆಗೆ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿದೆ. ಕಳೆದೆರಡು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿ ಪುನರಾರಂಭಿಸಿ ನೆಲಕ್ಕೆ ಟೈಲ್ಸ್ ಹಾಸಿ, ಸುಣ್ಣ ಬಣ್ಣ ಬಳಿದು, ವಿದ್ಯುತ್ ಸಂಪರ್ಕ ನೀಡಿ ಒಂದು ಹಂತದಲ್ಲಿ ಪೂರ್ಣಗೊಳಿಸಲಾಗಿತ್ತು. ಆದರೆ ಕಟ್ಟಡ ತುಂಬಾ ಚಿಕ್ಕದಾಗಿದೆ ಎಂಬ ತಕರಾರು ಸಮಾಜ ಕಲ್ಯಾಣ ಇಲಾಖೆಯಿಂದ ಕೇಳಿಬಂದ ಹಿನ್ನೆಲೆಯಲ್ಲಿ ಮತ್ತಷ್ಟು ದಿನ ಕಟ್ಟಡ ಕಾಮಗಾರಿ ನಿಂತಿದೆ.

ಗಿಡಗಂಟಿ ರಾಶಿ

ಸಮಾಜ ಕಲ್ಯಾಣ ಇಲಾಖೆ ಮೂಲಕವೇ ಮಂಜೂರಾದ ಅಂದಾಜುಪಟ್ಟಿ ಹಾಗೂ ನಕ್ಷೆಯಂತೆ ಕಟ್ಟಡ ನಿರ್ಮಿಸಲಾಗಿದೆ ಎಂಬ ವಾದ ಗುತ್ತಿಗೆದಾರರದ್ದು. ಕಡೆಗೂ ಕಟ್ಟಡದ ಪಶ್ಚಿಮ ಬದಿಯ ಗೋಡೆ ಒಡೆದು ಸುಮಾರು 10-15 ಅಡಿ ಕಟ್ಟಡ ಸೇರಿಸಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆಯಾದರೂ, ಅಲ್ಲಲ್ಲಿ ಅಪೂರ್ಣ ಕಾಮಗಾರಿ ಕಣ್ಣಿಗೆ ರಾಚುವಂತಿದೆ. ಕಟ್ಟಡದ ಸುತ್ತಲೂ ಆಳೆತ್ತರಕ್ಕೆ ಗಿಡಗಂಟಿ ಬೆಳೆದು ನಿಂತಿದ್ದು, ಜಲ್ಲಿ ಮತ್ತಿತರ ನಿರುಪಯುಕ್ತ ವಸ್ತುಗಳು ಕಟ್ಟಡದ ಸಮೀಪ ರಾಶಿ ಬಿದ್ದಿದೆ.

ಶೌಚಗೃಹ ನಿರ್ಮಾಣ

ತಾಪಂ ಅನುದಾನದಿಂದ ಆವರಣ ಗೋಡೆ ನಿರ್ಮಿಸಲಾಗಿದ್ದು, ಇದೂ ಪೂರ್ಣಗೊಳ್ಳಲು ಇನ್ನೂ ಲಕ್ಷಾಂತರ ರೂ. ಅನುದಾನದ ಅವಶ್ಯಕತೆ ಇದೆ. ಭವನದ ಹಿಂದೆ ತಾಪಂ ನಿಧಿಯಿಂದ ಗಂಡಸರು ಮತ್ತು ಹೆಂಗಸರಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣವಾಗುತ್ತಿದೆ.

ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ತಾಪಂ ನಿಧಿಯಿಂದ ಶೌಚಗೃಹ ನಿರ್ಮಾಣವಾಗುತ್ತಿದ್ದು, ಎರಡು ದಿಕ್ಕಿನಲ್ಲಿ ಆವರಣ ಗೋಡೆ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಅನುದಾನದ ಕೊರತೆ ಎದುರಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕು. -ನಾರಾಯಣ ಕೆ. ತಾಪಂ ಮಾಜಿ ಸದಸ್ಯ, ಗುಜ್ಜಾಡಿ https://www.vijayavani.net/a-competent-child-god-dancer-in-karkala https://www.vijayavani.net/service-to-the-youth-is-a-symbol-of-eternal-culture

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net