ಅಡ್ಡೂರು ಸೇತುವೆ ಸಂಚಾರ ಮುಕ್ತ?

Gur_Addur Bridge
Published on

ಧನಂಜಯ ಗುರುಪುರ

ಶಿಥಿಲಗೊಂಡಿದೆ ಎಂದು ಭಾರಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದ ಅಡ್ಡೂರು- ಪೊಳಲಿ ಸೇತುವೆಯಲ್ಲಿ ಬುಧವಾರದಿಂದ ನಿಯಮ ಉಲ್ಲಂಘಿಸಿ ಎಲ್ಲ ಭಾರಿ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿವೆ. ಈವರೆಗೂ ಮೌನ ವಹಿಸಿರುವ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳ ಹಿಂದೆ ಸೇತುವೆಯ ಎರಡೂ ಪಾರ್ಶ್ವದಲ್ಲಿ ಕಮಾನು ಅಳವಡಿಸಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆದರೆ ಈಚರ್‌ನಂಥ ಲಾರಿಗಳಲ್ಲಿ ನಿರಾತಂಕವಾಗಿ ಕಲ್ಲು, ಮಣ್ಣು, ಮರಳು ಸಾಗಾಟವಾಗುತ್ತಿತ್ತು. ಬಳಿಕ ಸೇತುವೆಗೆ ಅಳವಡಿಸಲಾದ ಕಮಾನು ಕಟ್ ಮಾಡಲಾಗಿದ್ದು, ಭಾರಿ ವಾಹನಗಳ ಸಂಚಾರ ಅಧಿಕಗೊಂಡಿವೆ. ಅಚ್ಚರಿಯ ಸಂಗತಿಯೆಂದರೆ ಮಾ.5ರಂದು ಸೇತುವೆ ಮೇಲೆ ಖಾಸಗಿ ಬಸ್‌ಗಳ ಸಹಿತ ಬೋರ್‌ವೆಲ್ ಕೊರೆಯುವ ಯಂತ್ರವನ್ನೊಳಗೊಂಡ ಭಾರಿ ವಾಹನವೂ ಸಂಚರಿಸುವುದು ಕಂಡುಬಂತು. ಇಷ್ಟಿದ್ದರೂ ಅಡ್ಡೂರು- ಪೊಳಲಿ ಸೇತುವೆ ಉಳಿಸಿ ಹೋರಾಟ ಸಮಿತಿ ಚಕಾರ ಎತ್ತಿಲ್ಲ..!

ವಾರದ ಹಿಂದೆ ಪೊಳಲಿಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದೊಂದಿಗೆ ಮಾತನಾಡಿ, ಮುಂದಿನ 10 ದಿನದೊಳಗೆ(ಮಾ.3ರೊಳಗೆ) ಸೇತುವೆಯ ಗರ್ಡರ್ ತೆರವುಗೊಳಿಸಿ ಹೊಸ ಬೇರಿಂಗ್ ಅಳವಡಿಸಲಾಗುವುದು. ಆ ಬಳಿಕ ನಿರ್ದಿಷ್ಟ ನಿಯಮಾನುಸಾರವಾಗಿ ಬಹುತೇಕ ಭಾರಿ ವಾಹನಗಳು ಸೇತುವೆ ಮೇಲೆ ಸಂಚರಿಸಲಿವೆ. ಈ ವಿಷಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದಿದ್ದರು.

*ಗರ್ಡರ್ ಅಳವಡಿಕೆಗೆ ಮೀನಮೇಷ: ಸಚಿವರ ಸೂಚನೆಯಂತೆ ಈವರೆಗೆ ಸೇತುವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಯಾವುದೇ ಕೆಲಸ ನಡೆದಿಲ್ಲ. ಸೇತುವೆ ಕೆಳಗಡೆ ಎರಡೂ ಕಡೆಯಿಂದ ನೀರಿಗೆ ಮಣ್ಣು- ಬಂಡೆ ಹಾಕಿ ಬಂಡು ರಸ್ತೆ ನಿರ್ಮಿಸಲಾಗಿದೆ. ಬಂಡು ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಗರ್ಡರ್ ಎತ್ತುವ ಅಥವಾ ಬೇರಿಂಗ್ ಅಳವಡಿಸುವ ಕೆಲಸಕ್ಕಾಗಿ ಪಿಡಬ್ಲುೃಡಿ ಇಲಾಖೆ ಮೀನಮೇಷ ಎಣಿಸುತ್ತಿದೆ. ಪ್ರಯಾಣಿಕರ ಖಾಸಗಿ ಬಸ್ ಮಾತ್ರ ಎಂದಿನಂತೆ ಸೇತುವೆ ಎರಡೂ ಪಾರ್ಶ್ವದಲ್ಲಿ ತಂಗುತ್ತಿವೆ. ಅಲ್ಲಿಂದ ಮುಂದಕ್ಕೆ ಪ್ರಯಾಣಿಕರು ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಖಾಸಗಿ ಬಸ್ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಜಿಲ್ಲಾಡಳಿತ ನಿರುತ್ಸಾಹ, ಜನರಿಗೆ ತೊಂದರೆ

ಇಲ್ಲೊಂದು ಲಾಬಿ ನಡೆಯುತ್ತಿದೆ ಎಂಬುದು ಸ್ಪಷ್ಟ. ಇಷ್ಟೊಂದು ಕಡು ಬೇಸಿಗೆಯಲ್ಲಿ ಸೇತುವೆ ದುರಸ್ತಿ ಕಾಮಗಾರಿ ನಡೆಸದೆ ಹೋದಲ್ಲಿ, ಅತಿಯಾದ ಉಷ್ಣಾಂಶಕ್ಕೆ ಅತಿ ಶೀಘ್ರ ಮಳೆಯಾದಲ್ಲಿ ಸೇತುವೆ ದುರಸ್ತಿ ಕೆಲಸ ಮತ್ತೆ ಮುಂದೂಡುವ ಸಾಧ್ಯತೆ ಹೆಚ್ಚಿದೆ. ಜಿಲ್ಲಾಡಳಿತದ ನಿರುತ್ಸಾಹದಿಂದ ಈ ಭಾಗದ ಶಾಲಾ- ಕಾಲೇಜು ವಿದ್ಯಾರ್ಥಿಗಳು, ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ವಯೋವೃದ್ಧರು, ಕೂಲಿ ಕಾರ್ಮಿಕರು ತೊಂದರೆ ಅನುಭವಿಸುವುದು ತಪ್ಪಿದ್ದಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.

ಬುಧವಾರ ಬಸ್‌ಗಳ ಸಹಿತ ಕೆಲವು ಭಾರಿ ವಾಹನಗಳು ಸೇತುವೆಯಲ್ಲಿ ಸಂಚರಿಸಿರುವ ಮಾಹಿತಿ ಸಿಕ್ಕಿದೆ. ಇಂಥ ಅನಧಿಕೃತ ಬೆಳವಣಿಗೆಯಲ್ಲಿ ವಾಹನ ಸವಾರರೇ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಪೊಳಲಿಯಲ್ಲಿ ಹೊಸ ಸೇತುವೆ ನಿರ್ಮಾಣವಾಗಬೇಕೆಂಬುದು ಸಮಿತಿ ಮುಖ್ಯ ಬೇಡಿಕೆಯಾಗಿದೆ. ಸೇತುವೆ ದುರಸ್ತಿ ಕೆಲಸ ಶೀಘ್ರ ಆರಂಭಿಸುವಂತೆ ತಹಸೀಲ್ದಾರ್‌ಗೆ ಮನವಿ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೆಲಸ ನಡೆಯಲಿವೆ. ಪೊಳಲಿ ದೇವಳದಲ್ಲಿ ನಡೆಯಲಿರುವ ಜಾತ್ರೆ(ಮಾ.14) ಸಂದರ್ಭ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ನಿರೀಕ್ಷಿಸಲಾಗಿದೆ. ಆ ವೇಳೆ ಸೇತುವೆ ಸಂಪೂರ್ಣ ಬಂದ್ ಆಗುವುದಿಲ್ಲ.

  • ಚಂದ್ರಹಾಸ ಪಲ್ಲಿಪಾಡಿ, ಕರಿಯಂಗಳ ಗ್ರಾ.ಪಂ. ಸದಸ್ಯರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net