

ನವದೆಹಲಿ: ಐರ್ಲೆಂಡ್ ತಂಡದ ಕೆವಿನ್ ಒಬ್ರೆಯನ್ ಓರ್ವ ಅದ್ಭುತ ಬ್ಯಾಟ್ಸ್ಮನ್ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದೀಗ ತಮ್ಮ ಸ್ಫೋಟಕ ಆಟದಿಂದಲೇ ಕೆವಿನ್, ಕ್ರಿಕೆಟ್ನಲ್ಲಿ ವಿಶೇಷತೆಯೊಂದನ್ನು ಮೆರೆದಿದ್ದಾರೆ. ಭರ್ಜರಿ ಸಿಕ್ಸರ್ ಮೂಲಕ ತಮ್ಮದೇ ಕಾರಿನ ಕಿಟಕಿ ಗಾಜನ್ನು ಪುಡಿಪುಡಿ ಮಾಡಿದ್ದಾರೆ.
ಕೆವಿನ್ ಎಂತಹ ಆಟಗಾರನ ಎನ್ನುವುದಕ್ಕೆ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯೇ ಸಾಕ್ಷಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವೇಗದ ಶತಕ ಬಾರಿಸುವುದರೊಂದಿಗೆ ಇಂಗ್ಲೆಂಡ್ ನೀಡಿದ್ದ 327 ರನ್ ಗುರಿಯನ್ನು ತಲುಪಿ ತಂಡದ ಗೆಲವಿಗೆ ಕೆವಿನ್ ಪ್ರಮುಖ ಕಾರಣವಾಗಿದ್ದರು. ಇದೀಗ ಇಂಟರ್-ಪ್ರಾವಿನ್ಶಿಯಲ್ ಟಿ20 ಟ್ರೋಫಿಯಲ್ಲಿ ಲೈನ್ಸ್ಟರ್ ಲೈಟನಿಂಗ್ ತಂಡದ ಪರ ಕೇವಲ 37 ಎಸೆತಗಳಲ್ಲೇ 82 ರನ್ ಗಳಿಸಿದ್ದಾರೆ.
ಪಂದ್ಯದಲ್ಲಿ ಕೆವಿನ್ ಅವರು ಬರೋಬ್ಬರಿ 8 ಸಿಕ್ಸರ್ ಸಿಡಿಸಿದ್ದಾರೆ. ಅದರಲ್ಲೊಂದು ಸಿಕ್ಸರ್ ಡಬ್ಲಿನ್ನ ಪೆಂಬ್ರೋಕ್ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಿಂದ ಹೊರಗೆ ಪಾರ್ಕ್ ಮಾಡಿದ್ದ ಕೆವಿನ್ ಅವರ ಕಾರಿನ ಕಿಟಕಿ ಗಾಜನ್ನೇ ಪುಡಿಪುಡಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪಂದ್ಯ ಮುಗಿದ ಬಳಿಕ ಕಾರು ಚಲಾಯಿಸಿಕೊಂಡು ನೇರವಾಗಿ ಗ್ಯಾರೇಜ್ಗೆ ಹೋದ ಕೆವಿನ್ ಕಾರಿನ ಕಿಟಕಿ ಗಾಜನ್ನು ಬದಲಾಯಿಸಿಕೊಂಡಿದ್ದಾರೆ. (ಏಜೆನ್ಸೀಸ್)