

ನವ ದೆಹಲಿ: ಎರಡು ಬಾರಿಯ ಟಿ-20 ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡ, ಈ ಬಾರಿ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೋಲೊಪ್ಪಿಕೊಳ್ಳುವ ಮೂಲಕ ಕೂಟದಿಂದಲೇ ಹೊರಬಿದ್ದಿದೆ.
ಹೋಬರ್ಟ್ನಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊದಲ ವಿಕೆಟ್ನಿಂದಲೂ ಬ್ಯಾಟಿಂಗ್ ವೈಫಲ್ಯ ಎದುರಿಸಿದ ವಿಂಡೀಸ್, ಬ್ರಾಂಡನ್ ಕಿಂಗ್ ಸಿಡಿಸಿದ ಅಜೇಯ 62 ರನ್ ಸಹಾಯದಿಂದ 145 ರನ್ ಗಳಿಸಲು ಸಾಧ್ಯವಾಯಿತು. ಐರ್ಲೆಂಡ್ ಪರ ಲೆಗ್ ಸ್ಪಿನ್ನರ್ ಡೆಲಾನಿ 4 ಓವರ್ ಬೌಲಿಂಗ್ ಮಾಡಿ, 16 ರನ್ ನೀಡಿ 3 ವಿಕೆಟ್ ಪದು ಮಿಂಚಿದರು.
ವಿಂಡೀಸ್ ನೀಡಿದ 145 ರನ್ಗಳ ಅಲ್ಪಮೊತ್ತದ ಬೆನ್ನು ಹತ್ತಿದ ಐರ್ಲೆಂಡ್ ತಂಡ ಬಲಿಷ್ಠವಾಗಿಯೇ ಬ್ಯಾಟಿಂಗ್ ಮಾಡಿತು. ಪಾಲ್ ಸ್ಟಿರ್ಲಿಂಗ್ ಮತ್ತು ನಾಯಕ ಬಲ್ಬಿರ್ನಿ ಮೊದಲ ವಿಕೆಟ್‌ಗೆ ಕೇವಲ 45 ಎಸೆತಗಳಲ್ಲಿ 73 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ಐರ್ಲೆಂಡ್ ತಂಡ 2.3 ಓವರ್ ಬಾಕಿ ಇರುವಂತೆಯೇ 9 ವಿಕೆಟ್ಗಳ ಜಯ ದಾಖಲಿಸಿತು.
ಐರ್ಲೆಂಡ್ ವಿರುದ್ಧ ಸೋತ ವೆಸ್ಟ್ ಇಂಡೀಸ್ ಟಿ-20 ವಿಶ್ವಕಪ್ನಿಂದ ಹೊರಬಿದ್ದಿದೆ. ಕೆರಿಬಿಯನ್ನರ ಕಳೆಪೆ ಬ್ಯಾಂಟಿಂಗ್ ಪ್ರದರ್ಶನ, ಐರ್ಲೆಂಡ್ ತಂಡದ ಗೆಲುವಿಗೆ ಕಾರಣವಾಗಿದೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸೋತಿದ್ದ ಐರ್ಲೆಂಡ್, ನಂತರ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟಿ-20 ವಿಶ್ವಕಪ್ ಆಡುವ ಅವಕಾಶ ಪಡೆದುಕೊಂಡಿದೆ.