More

    ಉಕ್ರೇನಿಯನ್​ ವಿಮಾನ ಪತನ ಪ್ರಕರಣ: ಕೊನೆಗೂ ತಪ್ಪೊಪ್ಪಿಕೊಂಡ ಇರಾನ್​

    ತೆಹ್ರಾನ: ವಿಶ್ವದ್ಯಾಂತ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಉಕ್ರೇನಿಯನ್​ ವಿಮಾನ ದುರಂತಕ್ಕೆ ಸಂಬಂಧಿಸಿ ಇರಾನ್​ ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನ್ನ ಸೇನಾ ಪಡೆ ತಪ್ಪಾಗಿ ಗ್ರಹಿಸಿ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನ್​ ಶನಿವಾರ ತಿಳಿಸಿದೆ.

    ಇರಾನ್​ ಶನಿವಾರ ಬೆಳಗ್ಗೆ ಹೇಳಿಕೆ ನೀಡಿದ್ದು, ವಿಮಾನ ಪತನಕ್ಕೆ ಮಾನವನ ಪ್ರಮಾದವೇ ಕಾರಣ ಎಂದು ಆರೋಪಿಸಿದೆ.

    ಬೋಯಿಂಗ್ 737 ಸರಣಿಯ ಉಕ್ರೇನಿಯನ್​ ವಿಮಾನ ಬುಧವಾರ ಬೆಳಗ್ಗೆ ಇರಾನ್​ನ ತೆಹ್ರಾನ್​ ಇಮಾಮ್​ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್​ನ ಕೈವ್‌ ಬೋರಿಸ್‌ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಏರ್​ಪೋರ್ಟ್​ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 176 ಮಂದಿ ದಾರುಣಾವಾಗಿ ಸಾವಿಗೀಡಾಗಿದ್ದರು.

    ಪ್ರಾರಂಭದಲ್ಲಿ ತಾಂತ್ರಿಕ ದೋಷದಿಂದಾಗಿದೆ ಎಂದು ಉಕ್ರೇನ್​ ಮತ್ತು ಇರಾನ್​ ಅಧಿಕಾರಿಗಳು ವಾದಿಸಿದ್ದರು. ಆದರೆ, ಪತನದ ಸ್ಥಳದಲ್ಲಿ ದೊರೆತ ಕ್ಷಿಪಣಿ ಅವಶೇಷದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿತು. ಅಲ್ಲದೆ, ವಿಮಾನ ಟೇಕಾಫ್​ ಆಗುವ ಮುನ್ನವೇ ಯುಎಸ್​ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್​ ರಾಕೆಟ್​ ದಾಳಿ ನಡೆಸಿದ್ದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

    ಇದರೊಂದಿಗೆ ಅನೇಕ ಗುಪ್ತಚರ ವರದಿಗಳು ಕೂಡ ತಾಂತ್ರಿಕ ದೋಷವೆಂಬುದು ಕೇವಲ ವಿವರಣೆಯಷ್ಟೇ, ಪತನಕ್ಕೆ ಕಾರಣ ರಾಕೆಟ್​ ದಾಳಿ ಎಂದು ಹೇಳಿದ್ದವು. ಇದರ ಬೆನ್ನಲ್ಲೇ ಉಕ್ರೇನ್​ ಕೂಡ ವಿಮಾನದ ಮೇಲೆ ಯಾರೋ ದಾಳಿ ಮಾಡಿದ್ದಾರೆ ಎಂದು ಒಪ್ಪಿಕೊಂಡಿತ್ತು. ಅಲ್ಲದೆ, ತನಿಖೆಗೆ ಆದೇಶಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕೂಡ ಇರಾನ್​ ಮೇಲೆ ನೇರ ಆರೋಪ ಮಾಡಿ, ತನಿಖೆಗೆ ಕೈಜೋಡಿಸುವುದಾಗಿ ತಿಳಿಸಿತ್ತು. ಆದರೆ, ಆರಂಭದಿಂದ ಇರಾನ್​ ಮಾತ್ರ ಯಾವುದನ್ನು ಒಪ್ಪಿಕೊಳ್ಳದೇ ತಿರಸ್ಕರಿಸಿತ್ತಾ ಬಂದಿತ್ತು. ಇದೀಗ ವಿಮಾನ ಪತನಕ್ಕೆ ತನ್ನ ಸೇನಾ ದಾಳಿಯೇ ಕಾರಣ ಎಂದು ಒಪ್ಪಿಕೊಂಡಿದೆ.​

    ವಿಮಾನದಲ್ಲಿದ್ದ ಒಟ್ಟು 176 ಜನರಲ್ಲಿ ವಿವಿಧ ದೇಶದ 167 ಪ್ರಯಾಣಿಕರು ಹಾಗೂ 9 ಸಿಬ್ಬಂದಿ ಇದ್ದರು. ಎಲ್ಲರೂ ಮೃತರಾಗಿದ್ದು, ವಿಮಾನದಲ್ಲಿ 82 ಇರಾನಿಯನ್ಸ್​, 63 ಕೆನಡಿಯನ್ಸ್​ ಹಾಗೂ 11 ಉಕ್ರೇನಿಯನ್ಸ್​ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts