ಹಾರ್ದಿಕ್​ ಪಾಂಡ್ಯಗೆ ಮತ್ತೊಂದು ಬಿಗ್​ ಶಾಕ್​! ಈತನೇ ಮುಂಬೈ ತಂಡದ ಮುಂದಿನ ನಾಯಕ?

Hardik Pandya
Published on

ನವದೆಹಲಿ: ಮುಂದಿನ ವರ್ಷ ನಡೆಯಲಿರುವ 18ನೇ ಐಪಿಎಲ್ ಸೀಸನ್​ಗೂ ಮುನ್ನ ಟೀಮ್​ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಟೀಮ್​​ ಇಂಡಿಯಾ ಟಿ20 ನಾಯಕತ್ವ ಕಳೆದುಕೊಂಡಿರುವ ಹಾರ್ದಿಕ್, ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನೂ ಕಳೆದುಕೊಳ್ಳಲಿದ್ದಾರಂತೆ.

ಹೌದು, ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಹಾರ್ದಿಕ್ ಅವರನ್ನು ಕೈಬಿಟ್ಟು ಆ ಸ್ಥಾನಕ್ಕೆ ಮಿಸ್ಟರ್ 360 ಎಂದೇ ಖ್ಯಾತಿಯಾಗಿರುವ ಸ್ಟಾರ್​ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಕೂರಿಸುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ವಲಯದಲ್ಲಿ ಜೋರು ಪ್ರಚಾರ ನಡೆಯುತ್ತಿದೆ. ಹಾರ್ದಿಕ್​ ಪಾಂಡ್ಯ ಅವರ ಫಿಟ್ನೆಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಮುಂಬೈ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.

ಐಪಿಎಲ್-2025ರ ಮೆಗಾ ಹರಾಜು ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಬಿಸಿಸಿಐ ಈಗಾಗಲೇ ಹರಾಜು ಪ್ರಕ್ರಿಯೆ ನಡೆಸಲು ಕಸರತ್ತು ಆರಂಭಿಸಿದೆ. ಇತ್ತೀಚೆಗಷ್ಟೇ ಬಿಸಿಸಿಐ, ಐಪಿಎಲ್​ ಫ್ರಾಂಚೈಸಿಗಳೊಂದಿಗೆ ಸಭೆ ನಡೆಸಿದೆ. ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಕೆಲ ಫ್ರಾಂಚೈಸಿಗಳು ಬೇಡಿಕೆ ಇಟ್ಟಿವೆ. ಮುಂಬೈ ಇಂಡಿಯನ್ಸ್ ಕೂಡ 7 ರಿಂದ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕೋರಿದೆ. ಸದ್ಯ ತಂಡದಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರರ ಬಗ್ಗೆ ಮುಂಬೈ ತಂಡ ವಿಶೇಷ ಗಮನ ಹರಿಸಿದೆ. ಆದರೆ, ನಾಯಕತ್ವ ಬದಲಾವಣೆಯಿಂದ ಅಸಮಾಧಾನಗೊಂಡಿರುವ ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ತಂಡದಲ್ಲಿ ಉಳಿದುಕೊಳ್ಳಲು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಮುಂಬೈ ಇಂಡಿಯನ್ಸ್ ಮ್ಯಾನೇಜ್​ಮೆಂಟ್​ ಆಟಗಾರರನ್ನು ಸಮಾಧಾನಪಡಿಸುವ ತಂತ್ರಕ್ಕೆ ಮೊರೆ ಹೋಗಿದೆ ಎನ್ನಲಾಗಿದೆ. ಇದರ ಭಾಗವಾಗಿ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ಪಟ್ಟ ಕಟ್ಟಲು ಮುಂಬೈ ಮುಂದಾಗಿದೆ ಎಂದು ವರದಿಯಾಗಿದೆ.

ಕಳೆದ ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡಕ್ಕೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಇತ್ತೀಚೆಗಷ್ಟೇ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯ ಆಯ್ಕೆಯಾಗಿದ್ದಾರೆ. ಫಿಟ್‌ನೆಸ್ ಸಮಸ್ಯೆಯ ಕಾರಣ ನೀಡಿ ಬಿಸಿಸಿಐ ಹಾರ್ದಿಕ್ ಅವರನ್ನು ವಜಾ ಮಾಡಿದೆ. ಈಗ ಮುಂಬೈ ಕೂಡ ಅದೇ ನೆಪ ಹೇಳಲಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net