

IPL 2025: ಐಪಿಎಲ್ 18ನೇ ಆವೃತ್ತಿಗೆ ಇಂದು ತೆರೆ ಬೀಳಲಿದೆ. ಇಂದು ಗುಜರಾತ್, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಅಂತಿಮ ಯುದ್ಧಕ್ಕೆ ತಮ್ಮ ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿವೆ. ಉಭಯ ತಂಡಗಳು ಈ ಪಂದ್ಯವನ್ನು ಗೆದ್ದು ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ದೃಢನಿಶ್ಚಯ ಹೊಂದಿವೆ.
ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ, ಭಾರತದ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (ಯುವರಾಜ್ ಸಿಂಗ್ ತಂದೆ) ಕೆಲವು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ವಿರುದ್ಧ ಪಂಜಾಬ್ ಜಾಗರೂಕರಾಗಿರಬೇಕೆಂದು ಎಚ್ಚರಿಸಿದ್ದಾರೆ. ಪವರ್‌ಪ್ಲೇನಲ್ಲಿ ಕೊಹ್ಲಿ ಔಟಾಗದಿದ್ದರೆ, 250 ರನ್‌ಗಳಿಗಿಂತ ಹೆಚ್ಚಿನ ಗುರಿಯನ್ನು ಹೊಂದಿದ್ದರೂ ಸಹ ಕೊಹ್ಲಿ ಚೇಸ್ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿಯನ್ನು ಬೇಗನೆ ಔಟ್ ಮಾಡದಿದ್ದರೆ ಪಂಜಾಬ್ ಭಾರಿ ಬೆಲೆ ತೆರಬೇಕಾಗುತ್ತದೆ. ಪವರ್‌ಪ್ಲೇನಲ್ಲಿ ಕೊಹ್ಲಿ ಔಟ್ ಆಗದಿದ್ದರೆ, ಅವರು 250 ರಿಂದ 300 ರನ್‌ಗಳ ಗುರಿಯನ್ನು ಬೆನ್ನಟ್ಟಬಹುದು. ಆದರೆ, ಪಂಜಾಬ್ ಉತ್ತಮ ತಂಡ. ಈ ಋತುವಿನಲ್ಲಿ ಅದ್ಭುತವಾಗಿ ಆಡಿದ್ದಾರೆ ಎಂದಿದ್ದಾರೆ.
ಈ ಪಂದ್ಯವನ್ನು ಪಂಜಾಬ್ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ, ಮೊದಲ ಹತ್ತು ಓವರ್‌ಗಳಲ್ಲಿ ಕೊಹ್ಲಿ ಔಟಾಗದಿದ್ದರೆ, ಪಂದ್ಯ ಏಕಪಕ್ಷೀಯವಾಗಿರುತ್ತದೆ. ಪಂಜಾಬ್‌ಗೆ ಒಬ್ಬ ಉತ್ತಮ ನಾಯಕನಿದ್ದಾನೆ. ಶ್ರೇಯಸ್ ಅಯ್ಯರ್ ಒಬ್ಬ ಪ್ರತಿಭಾನ್ವಿತ ಆಟಗಾರ. ಈ ಪಂದ್ಯ ಶ್ರೇಯಸ್ ಅಯ್ಯರ್ ಮತ್ತು ಕೊಹ್ಲಿ ನಡುವಿನ ಸ್ಪರ್ಧೆಯಾಗಿದೆ. ಆರ್‌ಸಿಬಿ ಗೆಲ್ಲಲು ಕೊಹ್ಲಿ ಇದ್ದರೆ, ಪಂಜಾಬ್‌ನಲ್ಲಿ ಅಯ್ಯರ್ ಇದ್ದಾರೆ. ಪಂಜಾಬ್ ಗೆಲ್ಲಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ ಎಂದು ಯೋಗರಾಜ್ ಸಿಂಗ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18 ಮತ್ತು ಇದು 18ನೇ ಆವೃತ್ತಿ ಎಂದಾಗಲೇ ಆರ್‌ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಇನ್ನಷ್ಟು ಜೋರಾಗಿ ಹೇಳುತ್ತಿದ್ದರು. ಅವರ ಈ ಘೋಷವಾಕ್ಯ ನಿಜವಾಗಲು ಇನ್ನೀಗ ಒಂದೇ ಒಂದು ಗೆಲುವು ಬೇಕಾಗಿದೆ. ಐಪಿಎಲ್ನಲ್ಲಿ ಮೊದಲ ಆವೃತ್ತಿಯಿಂದಲೂ ಒಂದೇ ತಂಡಕ್ಕೆ ನಿಷ್ಠೆಯಿಂದಿರುವ ಏಕೈಕ ಆಟಗಾರರಾಗಿರುವ ವಿರಾಟ್ ಕೊಹ್ಲಿಗೆ ಟ್ರೋಫಿ ಗೆಲುವಿನ ಪ್ರತಿಫಲ ಸಿಗಬೇಕಾಗಿದೆ ಎಂಬುದು ಅಭಿಮಾನಿಗಳ ಒತ್ತಾಸೆಯೂ ಆಗಿದೆ. ಹಾಲಿ ಆವೃತ್ತಿಯಲ್ಲಿ ಆರ್ಸಿಬಿಗೆ ಬ್ಯಾಟಿಂಗ್ನಲ್ಲಿ ಉಪಯುಕ್ತ ಕೊಡುಗೆ ನೀಡುತ್ತ ಬಂದಿರುವ ಕೊಹ್ಲಿ (614) ತಂಡದ ಗರಿಷ್ಠ ಸ್ಕೋರರ್ ಕೂಡ ಆಗಿದ್ದಾರೆ. ಅವರಿಗೆ ಫಿಲ್ ಸಾಲ್ಟ್ (387), ರಜತ್ ಪಾಟೀದಾರ್ (286), ಜಿತೇಶ್ ಶರ್ಮ (237) ಉತ್ತಮ ಬೆಂಬಲ ನೀಡುತ್ತ ಬಂದಿದ್ದಾರೆ. ಬೌಲಿಂಗ್ನಲ್ಲಿ ಆಸೀಸ್ ವೇಗಿ ಜೋಶ್ ಹ್ಯಾಸಲ್ವುಡ್ (21) ಆರ್ಸಿಬಿಯ ಟ್ರಂಪ್ ಕಾರ್ಡ್ ಎನಿಸಿದ್ದರೆ, ಕೃನಾಲ್ ಪಾಂಡ್ಯ (15), ಭುವನೇಶ್ವರ್ (15), ಯಶ್ ದಯಾಳ್ (12), ಸುಯಶ್ ಶರ್ಮ (8) ಉತ್ತಮ ಬೆಂಬಲ ಒದಗಿಸಿದ್ದಾರೆ. ಲೀಗ್ ಹಂತದಲ್ಲಿ ಒಮ್ಮೆ ಮಾತ್ರವಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೂ ಪಂಜಾಬ್ ಎದುರು ಬಲಿಷ್ಠ ನಿರ್ವಹಣೆ ತೋರಿ ಏಕಪಕ್ಷೀಯ ಗೆಲುವು ದಾಖಲಿಸಿದ ವಿಶ್ವಾಸ ಆರ್‌ಸಿಬಿ ತಂಡಕ್ಕಿದೆ.
ಟೂರ್ನಿಯುದ್ದಕ್ಕೂ ಸರ್ವಾಂಗೀಣ ನಿರ್ವಹಣೆ ತೋರುತ್ತ ಬಂದಿರುವ ಪಂಜಾಬ್ ಕಿಂಗ್ಸ್, 200 ಪ್ಲಸ್ ಮೊತ್ತದ ಚೇಸಿಂಗ್ನಲ್ಲಿ ಮಾತ್ರವಲ್ಲ, 111 ರನ್ ರಕ್ಷಿಸಿಕೊಳ್ಳುವ ಮೂಲಕವೂ ಗಮನಸೆಳೆದಿತ್ತು. ಮೊದಲ ಕ್ವಾಲಿಫೈಯರ್ನಲ್ಲಿ ಆರ್‌ಸಿಬಿ ಎದುರು ಸೋತು ನೇರವಾಗಿ ಫೈನಲ್ಗೇರುವ ಅವಕಾಶ ಕೈಚೆಲ್ಲಿತ್ತು. ಆದರೆ ಎರಡನೇ ಅವಕಾಶದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಅಮೋಘ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಸುತ್ತಿಗೇರುವಲ್ಲಿ ಯಶಸ್ವಿಯಾಗಿದೆ. ಇದೀಗ ಆರ್‌ಸಿಬಿ ಎದುರು ಸೇಡು ತೀರಿಸಿಕೊಳ್ಳುವ ಮೂಲಕ ಪ್ರಶಸ್ತಿ ಒಲಿಸಿಕೊಳ್ಳುವ ತವಕದಲ್ಲಿದೆ. 2ನೇ ಕ್ವಾಲಿಫೈಯರ್ ಮಾತ್ರವಲ್ಲ, ಟೂರ್ನಿಯುದ್ದಕ್ಕೂ ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದಾರೆ. ಶ್ರೇಯಸ್ (603) ಬ್ಯಾಟಿಂಗ್ ಪರಿಶ್ರಮಕ್ಕೆ ಪ್ರಭ್ಸಿಮ್ರನ್ ಸಿಂಗ್ (523), ಪ್ರಿಯಾಂಶ್ ಆರ್ಯ (451), ನೇಹಲ್ ವಧೇರ (354), ಜೋಶ್ ಇಂಗ್ಲಿಸ್ (239) ಉತ್ತಮ ಸಾಥ್ ನೀಡಿದ್ದಾರೆ. ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್ (18), ಯಜುವೇಂದ್ರ ಚಾಹಲ್ (15), ಹರ್ಪ್ರೀತ್ ಬ್ರಾರ್ (10) ಪಂಜಾಬ್‌ಗೆ ಬಲ ತುಂಬಿದ್ದಾರೆ. ಶ್ರೇಯಸ್ ಅಯ್ಯರ್-ರಿಕಿ ಪಾಂಟಿಂಗ್ ಜೋಡಿ ಕ್ಯಾಪ್ಟನ್-ಕೋಚ್ ಆಗಿ ಪಂಜಾಬ್ ತಂಡದಲ್ಲಿ ಮಾಡಿರುವ ಮೋಡಿಯೂ ಅಮೋಘವಾದುದು. (ಏಜೆನ್ಸೀಸ್)