ಐಪಿಎಲ್​ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ: ಏಪ್ರಿಲ್​ 6ರಂದು ನಡೆಯುವ ಪಂದ್ಯ ಮುಂದೂಡುವ ಸಾಧ್ಯತೆ! IPL 2025

IPL 2025
Published on

IPL 2025: ಕ್ರೀಡಾಭಿಮಾನಿಗಳು ಐಪಿಎಲ್-2025ರ ಸೀಸನ್​ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್ 22ರಂದು ಈ ಮೆಗಾ ಟೂರ್ನಮೆಂಟ್​ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​​ ಕೊಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ಮತ್ತು ಇದುವರೆಗೂ ಒಂದು ಬಾರಿಯು ಟ್ರೋಫಿ ಜಯಿಸದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ನಡುವೆ ನಡೆಯಲಿದೆ.

ತಾಜಾ ಸಂಗತಿ ಏನೆಂದರೆ, ಏಪ್ರಿಲ್ 6ರಂದು ಕೊಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಮರು ನಿಗದಿಪಡಿಸುವ ಸಾಧ್ಯತೆಯಿದೆ. ಬಂಗಾಳ ಪೊಲೀಸರು ಪಂದ್ಯಕ್ಕೆ ಅನುಮತಿ ನೀಡದ ಕಾರಣ ವೇಳಾಪಟ್ಟಿಯನ್ನು ಬದಲಾಯಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಏಪ್ರಿಲ್ 6ರಂದು ಶ್ರೀ ರಾಮ ನವಮಿ ಹಬ್ಬವಿದೆ. ಹೀಗಾಗಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ಸುಮಾರು 20,000 ಸ್ಥಳಗಳಲ್ಲಿ ಬೃಹತ್ ರ್ಯಾಲಿಗಳನ್ನು ನಡೆಸಲು ಯೋಜಿಸುತ್ತಿದ್ದಾರೆ. ಇದು ಭದ್ರತಾ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಪೊಲೀಸರು ಹೇಳುತ್ತಾರೆ. ಈ ಸಂದರ್ಭದಲ್ಲಿ, ಕ್ರೀಡಾಂಗಣದಲ್ಲಿ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಪಂದ್ಯವನ್ನು ಮರು ನಿಗದಿಪಡಿಸುವಂತೆ ಪೊಲೀಸರು ಬಂಗಾಳ ಕ್ರಿಕೆಟ್ ಸಂಘಕ್ಕೆ ಪತ್ರ ಬರೆದಿದ್ದಾರೆಂದು ವರದಿಯಾಗಿದೆ.

ಪೊಲೀಸರು ಬರೆದಿರುವ ಪತ್ರಕ್ಕೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ನಗರ ಪೊಲೀಸರೊಂದಿಗೆ ಈಗಾಗಲೇ ಎರಡು ಬಾರಿ ಚರ್ಚೆ ನಡೆಸಿದ್ದೇವೆ. ಪಂದ್ಯಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಪೊಲೀಸ್ ರಕ್ಷಣೆ ಇಲ್ಲದೆ 65,000 ಪ್ರೇಕ್ಷಕರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಪಂದ್ಯದ ದಿನಾಂಕದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಮಯವಿದೆ. ಈ ವಿಷಯವನ್ನು ಬಿಸಿಸಿಐ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ. ಬಹುತೇಕ ಅಂದು ನಡೆಯುವ ಪಂದ್ಯ ಬೇರೆ ದಿನ ನಡೆಯುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net