IPL 2024: ಆರ್​ಸಿಬಿ ಬಸ್​ಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಅಭಿಮಾನಿ!: ಬಸ್​ನಲ್ಲಿದ್ದ ಆಟಗಾರರು ಶಾಕ್​!

rcb
Published on

ಬೆಂಗಳೂರು: ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಮಹತ್ವದ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಯಾವುದೇ ಫೈನಲ್ ಪಂದ್ಯಕ್ಕೂ ಕಡಿಮೆ ಇಲ್ಲದಂತೆ ನಡೆದ ಈ ಪಂದ್ಯದ ಫಲಿತಾಂಶದ ಬಳಿಕ ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.

ಆರ್​ಸಿಬಿ ಗೆಲ್ಲುತ್ತಿದ್ದಂತೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸಂಭ್ರಮಿಸಿದರು. ಕೆಲವೆಡೆ ಪಟಾಕಿಗಳ ಸಂಭ್ರಮ ಮನೆ ಮಾಡಿದರೆ, ಮತ್ತೆ ಕೆಲವೆಡೆ ಕೇಕ್ ಕಟ್ಟಿಂಗ್​ ಮೂಲಕ ಆರ್​ಸಿಬಿ ಅಭಿಮಾನಿಗಳು ಸಂತಸ ಹಂಚಿಕೊಂಡರು.

ಪಂದ್ಯ ಆರಂಭಕ್ಕೂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೊರಟ ತಂಡದ ಬಸ್‌ನ ಹಿಂದೆ ಹಲವು ಕಿಲೋಮೀಟರ್‌ಗಳವರೆಗೆ ಅಭಿಮಾನಿಗಳ ಗುಂಪು ಇತ್ತು. ಬಿಗಿ ಭದ್ರತೆಯೊಂದಿಗೆ ಎರಡು ಬಸ್​ಗಳಲ್ಲಿ ಬಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರರನ್ನು ಕಂಡ ಅಭಿಮಾನಿಯೊಬ್ಬರು ಬಸ್​ಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಪೊಲೀಸರು ಯುವಕನ್ನು ಎಬ್ಬಿಸಿ ಬಸ್​ಗೆ ದಾರಿ ಮಾಡಿಕೊಟ್ಟರು. ಆರ್​ಸಿಬಿ ಫ್ಯಾನ್ಸ್​ಗಳ ಅಭಿಮಾನ ಕಂಡು ವಿದೇಶಿ ಆಟಗಾರರು ದಂಗಾಗಿದ್ದಾರೆ ಎನ್ನಲಾಗಿದೆ.

ರೋಚಕ ಪಂದ್ಯ ಮುಗಿದ ನಂತರವೂ ಚಿನ್ನಸ್ವಾಮಿ ಸ್ಟೇಡಿಯ್​ನಿಂದ ಹೊರಟ ತಂಡದ ಬಸ್‌ನ ಹಿಂದೆ ಹಲವು ಕಿಲೋಮೀಟರ್‌ಗಳವರೆಗೆ ಅಭಿಮಾನಿಗಳ ಗುಂಪು ಇತ್ತು. ಜನರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಮಧ್ಯರಾತ್ರಿ 1:30 ವರೆಗೆ ಕಾದುಕುಳಿತಿದ್ದರು. ಆರ್​ಸಿಬಿ ತನ್ನ ಎಕ್ಸ್ (ಹಿಂದೆ ಟ್ವಿಟ್ಟರ್) ಖಾತೆಯಲ್ಲಿ ಬಸ್​ನ ಒಳಗಡೆಯಿಂದ ಮಾಡಿದ ವಿಡಿಯೋವನ್ನು ಹಂಚಿಕೊಂಡಿದೆ. ಬೀದಿಯಲ್ಲಿ ನೂರಾರು ಜನರು ತಮ್ಮದೇ ಆದ ರೀತಿಯಲ್ಲಿ ವಿಜಯವನ್ನು ಆಚರಿಸುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ನಗರಗಳಲ್ಲಿ ಸಂಭ್ರಮಾಚರಣೆ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net