

ದುಬೈ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡಕ್ಕೆ 164 ರನ್ಗಳ ಸವಾಲಿನ ಗುರಿ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡಯುತ್ತಿರುವ ಐಪಿಎಲ್ನ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು.
ತಂಡದ ಪರ ಬ್ಯಾಟಿಂಗ್ ಆರಂಭಿಸಿದ ದೇವದತ್ ಪಡಿಕ್ಕಲ್ (56) ಹಾಗೂ ಆ್ಯರೂನ್ ಫಿಂಚ್ (29) ಮೊದಲ ವಿಕೆಟ್ಗೆ 90 ರನ್ಗಳ ಜತೆಯಾಟವಾಡಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಸಹ ಕ್ರೀಸ್ನಲ್ಲಿ ಹೆಚ್ಚು ಸಮಯ ನಿಲ್ಲದೆ 14 ರನ್ಗೆ ವಿಕೆಟ್ ಒಪ್ಪಿಸಿ ಪೆವಲಿಯನ್ ಸೇರಿದರು. ತಂಡಕ್ಕೆ ಉತ್ತಮ ಆರಂಭ ಒದಗಿದರು ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇತ್ತ ಏಕಾಂಗಿಯಾಗಿ ಹೋರಾಡಿದ ಎಬಿ ಡಿವಿಲಿಯರ್ಸ್ (51) ಅರ್ಧಶತಕದೊಂದಿಗೆ ತಂಡಕ್ಕೆ ಕೊಂಚ ಚೇತರಿಕೆ ನೀಡಿ ರನೌಟ್ ಆದರು. ಉಳಿದಂತೆ ಶಿವಂ ದುಬೆ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಜೋಶ್ ಫಿಲಿಫ್ (1) ರನ್ ಗಳಿಸಿ ಅಜೇಯರಾಗಿ ಉಳಿದರು.
ಹೈದರಾಬಾದ್ ಪರ ಟಿ. ನಟರಾಜನ್, ವಿಜಯ್ ಶಂಕರ್ ಮತ್ತು ಅಭಿಷೇಕ್ ಶರ್ಮ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಡಿವಿಲಿಯರ್ಸ್ ಮತ್ತು ದುಬೆ ರನೌಟ್ ಆದರು. (ಏಜೆನ್ಸೀಸ್)