VIDEO| ಚಲಿಸುವ ಬಸ್​ ಮೇಲೆ ಬಿತ್ತು ರೋಹಿತ್​ ಶರ್ಮಾ ಬಾರಿಸಿದ ಸಿಕ್ಸರ್​​ ಚೆಂಡು..!

Rohit
Published on

ದುಬೈ: ಹದಿಮೂರನೇ ಆವೃತ್ತಿಯ ಇಂಡಿಯನ್​ ಪ್ರಿಮಿಯರ್​ ಲೀಗ್​ಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್​ 19ರಂದು ಆರಂಭವಾಗಲಿರುವ ಟೂರ್ನಿಯ ಮೊದಲ ಪಂದ್ಯದಲ್ಲೇ ಚಾಂಪಿಯನ್​ಗಳಾದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಸೆಣಸಾಡಲಿವೆ. ಅದಕ್ಕಾಗಿ ಎರಡು ತಂಡಗಳು ಈಗಿನಿಂದಲೇ ಭಾರಿ ಕಸರತ್ತು ನಡೆಸುತ್ತಿವೆ.

ಮುಂಬೈ ತಂಡದ ನಾಯಕರಾಗಿರುವ ರೋಹಿತ್​ ಶರ್ಮಾ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಮುಂಬೈ ಇಂಡಿಯನ್ಸ್​ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ರೋಹಿತ್​ ಅವರ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?: ಬೌಲರ್​ ಎಸೆದ ಚೆಂಡನ್ನು ರೋಹಿತ್​ ಮುನ್ನುಗ್ಗಿ ಬಾರಿಸುತ್ತಾರೆ. ಚೆಂಡು ನೇರವಾಗಿ ಬೌಲರ್​ ತಲೆಯ ಮೇಲೆ ಹಾರಿ ಮೈದಾನದಿಂದ ಆಚೆಗೆ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ಸಿನ ಮೇಲೆ ಬೀಳುತ್ತದೆ. 95 ಮೀಟರ್​ ಉದ್ದದ ಭರ್ಜರಿ ಸಿಕ್ಸರ್​ ಇದಾಗಿದೆ. ಇದೀಗ ವಿಡಿಯೋ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ರೋಹಿತ್​ ಐಪಿಎಲ್​ ಟೂರ್ನಿಯ ಯಶಸ್ವಿ ನಾಯಕರುಗಳಲ್ಲಿ ಒಬ್ಬರು. ಇವರ ನಾಯಕತ್ವದಲ್ಲಿ ಮುಂಬೈ ತಂಡ ಈಗಾಗಲೇ ನಾಲ್ಕು ಬಾರಿ ಐಪಿಎಲ್​ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಹೆಚ್ಚು ಬಾರಿ ಟ್ರೋಫಿ ಜಯಿಸಿದ ಏಕೈಕ ತಂಡ ಎನಿಸಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net