ಡೆಲ್ಲಿ ಕ್ಯಾಪಿಟಲ್ಸ್​ಗೆ ಶರಣಾದ ಚೆನ್ನೈ ಸೂಪರ್​ ಕಿಂಗ್ಸ್​..!

Delhi Capitals
Published on

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಟೂರ್ನಿಯ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಚೆನ್ನೈ ಸೂಪರ್ಸ್​ ಕಿಂಗ್ಸ್​ ಎದುರು 44 ರನ್​​ಗಳ ಭರ್ಜರಿ ಜಯ ಸಾಧಿಸಿತು.

ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ 176 ರನ್​ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 131 ರನ್​ ಕಲೆಹಾಕಿತು.

ಆರಂಭಿಕರಾಗಿ ಕಣಕ್ಕಿಳಿದ ಮುರುಳಿ ವಿಜಯ್​ (10) ಮತ್ತು ಶೇನ್​ ವ್ಯಾಟ್ಸನ್​ (14) ಬಹುಬೇಗ ವಿಕೆಟ್​ ಒಪ್ಪಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ರುತುರಾಜ್​ ಗಾಯಕ್​ವಾಡ್​ (5) ಸಹ ಡಗೌಟ್​ ಸೇರಿದರು. ಕೇವಲ 44 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡು ಚೆನ್ನೈ ತಂಡ ಸಂಕಷ್ಟಕ್ಕೆ ಸಿಲುಕಿತು.

ಕೇದರ್​ ಜಾಧವ್​ (26) ಹಾಗೂ ಫಾಫ್​ ಡುಪ್ಲೆಸಿಸ್ (43) ಕೆಲವೊತ್ತು ಕ್ರೀಸ್​ನಲ್ಲಿ ನಿಲ್ಲುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರಾದರೂ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಒಪ್ಪಿಸಿದ್ದು ಚೆನ್ನೈ ಸೋಲು ಬಹುತೇಕ ಖಚಿತವಾಯಿತು. ನಾಯಕ ಧೋನಿ (15) ಬಹು ಬೇಗ ಔಟಾಗಿ ಹೊರ ನಡೆದರು. ರವೀಂದ್ರ ಜಡೇಜಾ (12) ಸಹ ಧೋನಿಯನ್ನೇ ಹಿಂಬಾಲಿಸಿದರು. ಕೊನೆಯಲ್ಲಿ ಸ್ಯಾಮ್​ ಕರನ್​ 1 ರನ್​ ಗಳಿಸಿ ಅಜೇಯರಾಗಿ ಉಳಿದರು.

ಡೆಲ್ಲಿ ಪರ ಕಾಗಿಸೋ ರಬಾಡ 3 ವಿಕೆಟ್​ ಕಬಳಿಸಿ ಮಿಂಚಿದರು. ಉಳಿದಂತೆ ಆ್ಯನ್ರಿಚ್​ ನೊರ್ಟ್ಜೆ 2 ವಿಕೆಟ್​ ಪಡೆದರೆ, ಅಕ್ಷರ್​ ಪಟೇಲ್​ 1 ವಿಕೆಟ್​ಗೆ ತೃಪ್ತಿಪಟ್ಟರು.

ಪೃಥ್ವಿ ಷಾ ಆಕರ್ಷಕ ಅರ್ಧಶತಕ

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 175 ರನ್​ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಶಿಖರ್​ ಧವನ್ ಮೊದಲ ವಿಕೆಟ್​ಗೆ​ 94 ರನ್​ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ 35 ರನ್​ ಗಳಿಸಿದ್ದ ಧವನ್​ ಎಲ್​ಬಿ ಬಲೆಗೆ ಬಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ 64 ರನ್​ ಗಳಿಸಿದ ಪೃಥ್ವಿ ಶಾ ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪೌಟ್​ ಆದರು. ನಾಯಕ ಶ್ರೇಯಸ್​ ಅಯ್ಯರ್​ 26 ರನ್​ಗಳ ಕಾಣಿಕೆ ನೀಡಿದರೆ, ರಿಷಬ್​ ಪಂತ್​ (35) ಮತ್ತು ಮಾರ್ಕಸ್​ ಸ್ಟೋನಿಸ್​ (5) ರನ್​ ಗಳಿಸಿ ಅಜೇಯರಾಗಿ ಉಳಿದರು.

ಚೆನ್ನೈ ಪರ ಪಿಯುಸ್​ ಚಾವ್ಲ 2 ವಿಕೆಟ್​ ಪಡೆದರೆ, ಸ್ಯಾಮ್​ ಕರನ್​ 1 ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net