ಗುಜರಾತ್ ಟೈಟಾನ್ಸ್- ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

gujarat team gill for web
Published on

ಪುಣೆ: ಶುಭಾರಂಭ ಕಂಡಿರುವ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-15ರ ಹಣಾಹಣಿಯಲ್ಲಿ ಶನಿವಾರ ಎದುರಾಗಲಿವೆ. ಉಭಯ ತಂಡಗಳ ಹಣಾಹಣಿಗೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ ) ಸ್ಟೇಡಿಯಂ ವೇದಿಕೆಯಾಗಲಿದೆ. ಮುಂಬೈನಲ್ಲಿ ಚೇಸಿಂಗ್ ತಂಡಗಳೇ ಗೆಲುವಿನ ದಡ ಸೇರುತ್ತಿದ್ದರೆ, ಎಂಸಿಎಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ತಂಡ, ಸನ್‌ರೈಸರ್ಸ್‌ ತಂಡವನ್ನು ಸೋಲಿಸಿತ್ತು. ಸ್ಪರ್ಧಾತ್ಮಕ ಪಿಚ್ ಜತೆಗೆ ಮುಂಬೈಗೆ ಹೋಲಿಸಿದರೆ ಇಬ್ಬನಿ ಸಮಸ್ಯೆ ಪುಣೆಯಲ್ಲಿ ಅಷ್ಟಾಗಿ ಕಾಡುತ್ತಿಲ್ಲ. ಹೀಗಾಗಿ ಪಂದ್ಯದ ಫಲಿತಾಂಶವೂ ಕುತೂಹಲಕಾರಿಯಾಗಿದೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿರುವ ಲುಂಗಿ ಎನ್‌ಗಿಡಿ, ಮುಸ್ತಾಫಿಜರ್ ರೆಹಮಾನ್ ಹಾಗೂ ರ್ಸ್ರಾಜ್ ಖಾನ್ ಸೇರ್ಪಡೆಗೊಂಡಿದ್ದಾರೆ. ಇದು ಡೆಲ್ಲಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮತ್ತೊಂದೆಡೆ, ಲೀಗ್ ಪದಾರ್ಪಣೆ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದ್ದ ಗುಜರಾತ್ ಟೈಟಾನ್ಸ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತ್ತು.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್:

ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿರುವ ಲುಂಗಿ ಎನ್‌ಗಿಡಿ, ಮುಸ್ತಾಫಿಜರ್ ರೆಹಮಾನ್ ಆಗಮನದಿಂದಾಗಿ ಕೆಲ ಬದಲಾವಣೆಯೊಂದಿಗೆ ಡೆಲ್ಲಿ ಕಣಕ್ಕಿಳಿಯಲಿದೆ.

ಗುಜರಾತ್ ಟೈಟಾನ್ಸ್:

ಎಲ್‌ಎಸ್‌ಜಿ ಎದುರು ರೋಚಕ ಜಯ ಕಂಡಿದ್ದ ಟೈಟಾನ್ಸ್ ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net