ನೀರೊಳಗೆ ಬಿತ್ತು 4 ದಿನದ ಹಿಂದೆ ಖರೀದಿಸಿದ ಐಫೋನ್: ಹಲವು ಗಂಟೆಯ ನಂತ್ರ ಮತ್ತೆ ಸಿಕ್ಕಿದಾಗ ಕಾದಿತ್ತು ಅಚ್ಚರಿ! iPhone ​

iPhone
Published on

iPhone : ಐಫೋನ್ ಖರೀದಿಸಲು ಇಷ್ಟಪಡದವರು ಬಹಳ ಕಡಿಮೆ. ಅನೇಕ ಜನರು ಐಫೋನ್ ಖರೀದಿಸಲು ಹಣವನ್ನು ಉಳಿಸಿ ಇಎಂಐಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಭರವಸೆ ಮತ್ತು ಆಸೆಯಿಂದ ಖರೀದಿಸಿದ ಫೋನ್ ನೀರಿನ ಒಳಗೆ ಬಿದ್ದರೆ ಹೇಗಿರುತ್ತೆ? ನಿಜಕ್ಕೂ ಆಘಾತ ಉಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ. ಅಂತಹ ಒಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಾಲ್ಕು ದಿನಗಳ ಹಿಂದೆ ಖರೀದಿಸಲಾದ ಐಫೋನ್ 16 ಪ್ರೊ ಮ್ಯಾಕ್ಸ್ ನೀರಿಗೆ ಬಿದ್ದಾಗ, ಅದನ್ನು ಮರುಪಡೆಯಲು ಪ್ರಯತ್ನಿಸುತ್ತಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಐಫೋನ್​ 16 ಪ್ರೊ ಮ್ಯಾಕ್ಸ್‌ಗೆ ಇದಕ್ಕಿಂತ ದೊಡ್ಡ ಪ್ರಚಾರ ಬೇರೆಲ್ಲೂ ಸಿಗುವುದಿಲ್ಲ ಎಂಬ ಟಿಪ್ಪಣಿಯೊಂದಿಗೆ ವಿಡಿಯೋ ಆರಂಭವಾಗುತ್ತದೆ. ಕೇರಳದಲ್ಲಿ ಇದು ಎಲ್ಲಿ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ನಾಲ್ಕು ದಿನಗಳ ಹಿಂದೆ ಖರೀದಿಸಲಾದ ಐಫೋನ್ 16 ಪ್ರೊ ಮ್ಯಾಕ್ಸ್ ನೀರಿನಲ್ಲಿ ಕಳೆದುಹೋಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಕಯಾಕಿಂಗ್ ಗುಂಪಿನ ದೋಣಿ ಮಗುಚಿಬಿದ್ದು ಫೋನ್ ನೀರಿಗೆ ಬಿದ್ದಿದೆ. ನಂತರ, ಸ್ನೇಹಿತರು ಮತ್ತು ಸ್ಥಳೀಯರು ಸೇರಿ ಫೋನ್ ಹುಡುಕಲು ನೀರಿಗೆ ಧುಮುಕಿದರು. ಅಷ್ಟರಲ್ಲಿ, ಯಾರೋ ಬಲೆ ಬೀಸಿ ಫೋನ್ ಅನ್ನು ಹಿಂಪಡೆಯಲು ಪ್ರಯತ್ನಿಸಿದರು.

ಕೊನೆಗೂ, ಗಂಟೆಗಳ ಪ್ರಯತ್ನದ ನಂತರ ಯಾರೋ ಫೋನ್ ಅನ್ನು ಹುಡುಕುವಲ್ಲಿ ಯಶಸ್ವಿಯಾದರು. ಆದರೆ, ದೊಡ್ಡ ತಿರುವು ಏನೆಂದರೆ, ಗಂಟೆಗಟ್ಟಲೆ ನೀರಿನಲ್ಲಿದ್ದ ಫೋನ್ ಸ್ವಿಚ್​ ಆಫ್ ಆಗಿರಲಿಲ್ಲ. ಇದಲ್ಲದೆ, ಬೇರೆ ಯಾವುದೇ ಹಾನಿಯಾಗಿಲ್ಲ.

ವಿಡಿಯೋದಲ್ಲಿರುವ ವ್ಯಕ್ತಿಯೊಬ್ಬರು ಐಫೋನ್‌ಗೆ ಇದಕ್ಕಿಂತ ದೊಡ್ಡ ಪ್ರಚಾರ ಸಿಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆದ ನಂತರ, ಅನೇಕ ಜನರು ಬಗೆಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net