ಕೇವಲ ರೂ 48,000 ಹೂಡಿಕೆ ಒಂದು ಕೋಟಿಯಾಯ್ತು: ಸದ್ಯ ಕುಸಿತ ಕಂಡಿರುವ ಈ ಮಲ್ಟಿಬ್ಯಾಗರ್​ ಷೇರು ಖರೀದಿಗೆ ಸಲಹೆ ನೀಡುತ್ತವೆ ಬ್ರೋಕರೇಜ್​ ಸಂಸ್ಥೆಗಳು

tanla
Published on

ಮುಂಬೈ: ಮಲ್ಟಿಬ್ಯಾಗರ್ ಸ್ಟಾಕ್‌ ಆಗಿರುವ ಹಾಗೂ ಬಹುರಾಷ್ಟ್ರೀಯ ಕ್ಲೌಡ್-ಆಧಾರಿತ ಸಂವಹನ ಕಂಪನಿಯಾಗಿರುವ ತನ್ಲಾ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (Tanla Platforms Ltd ) ಕಂಪನಿಯ ಷೇರುಗಳು ಸೋಮವಾರ ಶೇ. 3.6ರಷ್ಟು ಕುಸಿತವನ್ನು ದಾಖಲಿಸಿವೆ. ಕಳೆದೊಂದು ವಾರದಲ್ಲಿ ಶೇಕಡಾ 15ರಷ್ಟು ಹಾಗೂ ಕಳೆದೊಂದು ತಿಂಗಳಲ್ಲಿ ಶೇಕಡಾ 8ರಷ್ಟು ಹಿನ್ನಡೆಯನ್ನು ಈ ಷೇರುಗಳು ಕಂಡಿವೆ.

ಆದರೆ, ಇದೇ ಕಂಪನಿಯ ಷೇರುಗಳು ದೀರ್ಘಾವಧಿಯಲ್ಲಿ ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿವೆ. ಕಳೆದ 10 ವರ್ಷಗಳ ಹಿಂದೆ ಕೇವಲ 48 ಸಾವಿರ ರೂಪಾಯಿ ಹೂಡಿಕೆ ಮಾಡಿದ ಮೊತ್ತವು 1 ಕೋಟಿ ರೂಪಾಯಿ ತಲುಪಿದೆ. ಏಕೆಂದರೆ, 2014 ರ ಜನವರಿ 31 ರಂದು ಈ ಕಂಪನಿಯ ಷೇರು ಬೆಲೆ ಕೇವಲ 4.92 ರೂಪಾಯಿ ಇತ್ತು. ಈಗ ಷೇರಿನ ಬೆಲೆ 1000 ರೂಪಾಯಿ ತಲುಪಿದೆ. ಕಳೆದ ವರ್ಷದಲ್ಲಂತೂ ಕೇವಲ 3 ತಿಂಗಳ ಅವಧಿಯಲ್ಲಿ ಎರಡೂವರೆ ಪಟ್ಟು ಹೆಚ್ಚಳ ಕಂಡಿತ್ತು. ಕಳೆದ ವರ್ಷ ಮಾರ್ಚ್ 27 ರಂದು ಷೇರು ಬೆಲೆ 506.10 ರೂಪಾಯಿ ಇತ್ತು. ಇದರ ನಂತರ, ಮೂರು ತಿಂಗಳೊಳಗೆ, ಇದು 160 ಪ್ರತಿಶತದಷ್ಟು ಹೆಚ್ಚಾಯಿತು. ಕಳೆದ ಜುಲೈ 24,ರಂದು 1317.70 ರೂಪಾಯಿಗೆ ತಲುಪಿತ್ತು.

ಈಗ ಈ ಕಂಪನಿ ತನ್ನ ಷೇರುದಾರರಿಗೆ ಲಾಭಾಂಶ (ಡಿವಿಡೆಂಡ್​) ನೀಡಲು ಮುಂದಾಗಿದೆ. ಪ್ರತಿ ಷೇರಿಗೆ 6 ರೂಪಾಯಿಗಳ ಲಾಭಾಂಶವನ್ನು ಕಂಪನಿಯು ಹೂಡಿಕೆದಾರರಿಗೆ ಫೆಬ್ರವರಿ 5ರಂದು ಪಾವತಿಸಲಿದೆ.

ಬ್ರೋಕರೇಜ್ ಸಂಸ್ಥೆಗಳು ಈ ಕಂಪನಿಯ ಷೇರುಗಳ ಬಗ್ಗೆ ಆಶಾವಾದ ಇಟ್ಟುಕೊಂಡಿದ್ದು, ಖರೀದಿಗೆ ಉತ್ತಮ ರೇಟಿಂಗ್‌ ನೀಡಿವೆ. ಈಗ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚು ಲಾಭ ಮಾಡಬಹುದು ಎಂಬುದನ್ನು ಈ ರೇಟಿಂಗ್ ಸೂಚಿಸುತ್ತದೆ.

ಆದರೆ, ಈಗ ಷೇರುಗಳ ಬೆಲೆ ವೇಗದಲ್ಲಿ ಮುಂದುವರಿಯುತ್ತಿಲ್ಲ. ಗರಿಷ್ಠ ಬೆಲೆಗಿಂತ ಈಗ ಶೇಕಡಾ 21ರಷ್ಟು ಕಡಿಮೆ ಇದೆ. ಪ್ಲಾಟ್‌ಫಾರ್ಮ್‌ಗಳು ಮತ್ತು ಎಂಟರ್‌ಪ್ರೈಸ್ ವಿಭಾಗಗಳಲ್ಲಿನ ನಿಧಾನಗತಿಯ ಬೆಳವಣಿಗೆಯು ಕಳೆದ ಡಿಸೆಂಬರ್​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದ ಮೇಲೆ ಪರಿಣಾಮ ಬೀರಿದೆ. ವಿಐ ನೆಟ್‌ವರ್ಕ್‌ಗಳಿಂದ ಆದಾಯದ ಕುಸಿತದಿಂದಾಗಿ ಕಂಪನಿಯ ಆದಾಯದ ಮೇಲೆ ಪರಿಣಾಮ ಬೀರಿದೆ.

ಮುಂದಿನ ದಿನಗಳಲ್ಲಿ, ಒಟಿಪಿಯಲ್ಲಿನ ಮುಂದುವರಿದ ಬೆಳವಣಿಗೆಯಿಂದಾಗಿ 15 ಪ್ರತಿಶತ ಅಥವಾ ಅದಕ್ಕಿಂತ ಅಧಿಕ ಆದಾಯ ವೃದ್ಧಿಸಲಿದೆ ಎಂದು ಊಹಿಸಲಾಗಿದೆ. ಬೆಳೆಯುತ್ತಿರುವ ಪ್ಲಾಟ್‌ಫಾರ್ಮ್ ವಿಭಾಗವು ವೈಸ್ಲಿ ಮತ್ತು ಟ್ರುಬ್ಲೋಕ್‌ನಿಂದ ಸಹಾಯ ಮಾಡಲ್ಪಟ್ಟಿದೆ. ತನ್ಲಾ ತನ್ನ ಚೊಚ್ಚಲ ವೈಸ್ಲಿ ಎಟಿಪಿ (ಆಂಟಿ ಫಿಶಿಂಗ್ ಉತ್ಪನ್ನಗಳು) ಒಪ್ಪಂದವನ್ನು ಬೃಹತ್ ಖಾಸಗಿ ಬ್ಯಾಂಕ್‌ನೊಂದಿಗೆ ಮಾಡಿದೆ.

ದೇಶೀಯ ಬ್ರೋಕರೇಜ್ ಸಂಸ್ಥೆಯು ಈ ಷೇರಿನ ಖರೀದಿ ರೇಟಿಂಗ್ ಅನ್ನು 1300 ರೂಪಾಯಿಗಳ ಟಾರ್ಗೆಟ್​ ಪ್ರೈಸ್​ಗೆ ನಿಗದಿಪಡಿಸಿದೆ.

ತನ್ಲಾ ಪ್ಲಾಟ್​ಫಾರ್ಮ್ಸ್ ಲಿಮಿಟೆಡ್​ ಕ್ಲೌಡ್ ಆಧಾರಿತ ಸಂವಹನವಾಗಿದೆ. ಇದು ಇತರ ಮಾಹಿತಿ ಮತ್ತು ಸಂವಹನ ಸೇವಾ ಚಟುವಟಿಕೆಗಳ ವ್ಯಾಪಾರದಲ್ಲಿ ತೊಡಗಿದೆ. ಇದು ತಂತ್ರಜ್ಞಾನ ಉತ್ಪನ್ನಗಳನ್ನು ತಯಾರಿಸಿ, ವಿತರಿಸುತ್ತದೆ, ಜೊತೆಗೆ ಮೊಬೈಲ್ ಪಾವತಿಗಳು ಮತ್ತು ಸಂದೇಶ ಕಳುಹಿಸುವಿಕೆಗಾಗಿ ಸೇವೆಗಳನ್ನು ನೀಡುತ್ತದೆ. ಕಂಪನಿಯ ಉತ್ಪನ್ನಗಳು ಟ್ರುಬ್ಲೋಕ್, ವೈಸ್ಲಿ, ವಾಯ್ಸ್ ಮೆಸೇಜಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಒಳಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net