ನಿಂತಿಲ್ಲ ಚೀನಾ ಹೂಡಿಕೆ ಆ್ಯಪ್ ಹಾವಳಿ; ಅಧಿಕ ಲಾಭಾಂಶದ ಹೆಸರಿನಲ್ಲಿ 1.75 ಲಕ್ಷ ರೂ. ವಂಚನೆ

fraud
Published on

ಬೆಂಗಳೂರು : ಕರೊನಾ ಲಾಕ್‌ಡೌನ್‌ನಲ್ಲಿ ಜನರನ್ನು ವಂಚಿಸಿದ ಚೀನಿ ಆ್ಯಪ್‌ನಲ್ಲಿ ಹೂಡಿಕೆ ಹಾವಳಿ ಇನ್ನೂ ತಪ್ಪಿಲ್ಲ. ಅಧಿಕ ಲಾಭಾಂಶ ಕೊಡುವುದಾಗಿ ವ್ಯಕ್ತಿಯೊಬ್ಬರಿಗೆ ಆಮಿಷವೊಡ್ಡಿ ಹೂಡಿಕೆ ಆ್ಯಪ್‌ನಲ್ಲಿ ಲಕ್ಷಾಂತರ ರೂ. ಸುಲಿಗೆ ಮಾಡಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ವೈಟ್‌ಫೀಲ್ಡ್ ಮೈತ್ರಿ ಲೇಔಟ್ ನಿವಾಸಿ ಮನಿಷ್ ಮಿಶ್ರಾ (46) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸನಯ ಮತ್ತು ಟೀಚರ್ ಲೈ ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ವೈಟ್‌ಫೀಲ್ಡ್ ಉಪವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮನಿಷ್‌ಗೆ ಕರೆ ಮಾಡಿದ ಆರೋಪಿಗಳು, ಕ್ಯಾಷ್‌ಫ್ರೀ ಬೆಂಗಳೂರು ಎಂಬ ಕಂಪನಿ ಝಿಪ್‌ಬಿಟ್ ಮೊಬೈಲ್ ಆ್ಯಪ್‌ ಹೊರ ತಂದಿದೆ. ಈ ಹೂಡಿಕೆ ಆ್ಯಪ್‌ನಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭ ಬರಲಿದೆ ಎಂದು ನಂಬಿಸಿದ್ದರು. ಹೆಚ್ಚಿನ ಲಾಭಾಂಶದ ಆಸೆಯಿಂದ ಆರಂಭದಲ್ಲಿ 1.75 ಲಕ್ಷ ರೂ.ಗಳನ್ನು ಝಿಪ್‌ಬಿಟ್ ಆ್ಯಪ್‌ನಲ್ಲಿ ಮನಿಷ್ ಹೂಡಿಕೆ ಮಾಡಿದ್ದರು. ಇದಾದ ಕೆಲವೇ ದಿನಕ್ಕೆ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಹೂಡಿಕೆ ಮೊತ್ತ 9.43 ಲಕ್ಷ ರೂ.ಗೆ ಏರಿಕೆಯಾಗಿತ್ತು. ಅದನ್ನು ವಾಪಸ್ ಪಡೆಯಲು ಮನಿಷ್ ಮುಂದಾದರು.

ಕಂಪನಿ ಅಧಿಕಾರಿಗೆ ಕರೆ ಮಾಡಿ ಹೂಡಿಕೆ ಹಣ ವಾಪಸ್ ಪಡೆಯುವುದಾಗಿ ಹೇಳಿದಾಗ ಮತ್ತೆ 1 ಲಕ್ಷ ರೂ. ಶುಲ್ಕ ಪಾವತಿ ಮಾಡಬೇಕೆಂದು ಸೂಚಿಸಿದ್ದರು. ಆದರೆ, ಇದಕ್ಕೆ ಮನಿಷ್ ಒಪ್ಪದೆ ಇದ್ದಾಗ ಆರೋಪಿಗಳು ಝಿಪ್‌ಬಿಟ್ ಆ್ಯಪ್‌ನ್ನು ಸ್ಥಗಿತ ಮಾಡಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಸಂಪರ್ಕ ಸಿಗದೆ ಇದ್ದಾಗ ನೊಂದ ಮನಿಷ್, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ದೂರು ನೀಡಿದ್ದಾರೆ. ಇದು ಚೀನಿ ಆ್ಯಪ್ ಮಾದರಿ ಆಗಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net