ಬೆಂಗಳೂರು: ಗೀತೆ ರಚನೆ, ನಿರ್ದೇಶನ, ಸಂಭಾಷಣೆ, ಸಂಗೀತ ನಿರ್ದೇಶನ ಹಾಗೂ ನಟನೆ ಹೀಗೆ ಚಿತ್ರರಂಗದ ಎಲ್ಲ ಕ್ಷೇತ್ರಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡವರು ಡಾ.ವಿ.ನಾಗೇಂದ್ರ ಪ್ರಸಾದ್. ‘ನಲ್ಲ’, ‘ಅಂಬಿ, ‘ಮೇಘವೇ ಮೇಘವೇ’, ‘ವಿನಾಯಕ ಗೆಳೆಯರ ಬಳಗ’, ‘ಗೂಗಲ್’ ಚಿತ್ರಗಳನ್ನು ನಿರ್ದೇಶಿಸಿರುವ ನಾಗೇಂದ್ರ ಪ್ರಸಾದ್ ಕನ್ನಡದಲ್ಲಿ 3000ಕ್ಕೂ ಅಧಿಕ ಚಿತ್ರಗೀತೆಗಳನ್ನು ರಚಿಸಿದ್ದಾರೆ. ‘ಚೌಕ’ ಚಿತ್ರದ ‘ಅಪ್ಪ ಐ ಲವ್ ಯೂ ಪಾ’ ಹಾಗೂ ‘ಬನಾರಸ್’ ಸಿನಿಮಾದ ‘ಬೆಳಕಿನ ಕವಿತೆ’ ಇತ್ತೀಚಿನ ವರ್ಷಗಳಲ್ಲಿ ಹಿಟ್ ಆಗಿರುವ ಚಿತ್ರಗೀತೆಗಳು. ಚಿತ್ರ ಸಾಹಿತ್ಯಕ್ಕಾಗಿ ನಾಗೇಂದ್ರ ಪ್ರಸಾದ್ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಒದಗಿ ಬಂದಿವೆ. ‘ಫಿಲ್ಮ್ ೇರ್ ಅವಾರ್ಡ್’, ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ;, ‘ದಕ್ಷಿಣ ಭಾರತ ಅಂತಾರಾಷ್ಟ್ರೀಯ ಫಿಲ್ಮ್ ಅವಾರ್ಡ್’ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೀಗ ಮತ್ತೊಂದು ಪ್ರಶಸ್ತಿ ಇವರಿಗೆ ಸಂದಿದೆ.
ದುಬೈನ ಅಂತಾರಾಷ್ಟ್ರೀಯ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಒಕ್ಕೂಟವು ನಾಗೇಂದ್ರ ಪ್ರಸಾದ್‌ಗೆ ‘ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಒಕ್ಕೂಟದ 15ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಮಾರಂಭದಲ್ಲಿ ದುಬೈ ರಾಜಮನೆತನದ ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಮಝರೂಕಿ , ಜುಮಾ ಅಲ್ ಮದನಿ, ಮುನೀರಾ ಅಲ್ ಬಲೂಷಿ ಇದ್ದರು. ಒಕ್ಕೂಟದ ಅಂತಾರಾಷ್ಟ್ರೀಯ ಅಧ್ಯಕ್ಷ ಶಕೀಲ್ ಹಸನ್, ‘ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದು ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾಗಿದೆ’ ಎಂದರು.