ವ್ಯಸನದ ಸುಳಿಗೆಸಿಲುಕದಿರಿ....!

international day against drug abuse
Published on

ವ್ಯಸನ ಎಂದರೆ ಮಿದುಳಿನ ಅಸ್ವಸ್ಥತೆ. ಇದರ ಮೇಲೆ ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಪ್ರಭಾವವೂ ಇರುತ್ತದೆ. ಕ್ಷಣಿಕ ಸುಖಕ್ಕಾಗಿ ಮಾದಕ ದ್ರವ್ಯಗಳ (ಮದ್ಯ ಸಿಗರೇಟ್, ಡಗ್ರ್ ಇತ್ಯಾದಿ) ಅವಲಂಬನೆಗೆ ಒಳಗಾಗುವುದೇ ವ್ಯಸನ.

ತಾವು ರೂಢಿಸಿಕೊಂಡಿರುವ ವ್ಯಸನದಿಂದ ಮಾತ್ರವೇ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯ, ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಆ ಚಟಕ್ಕೆ ಅವಲಂಬಿತರಾಗಿರುತ್ತಾರೆ. ಮಾದಕ ವ್ಯಸನವು ಗಂಭೀರವಾದ ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಅಂತಹ ಒಂದು ವ್ಯಸನದ ಸುಳಿಗೆ ಸಿಲುಕಿದಿರಿ ಅಂತಾದರೆ, ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಮಾದಕ ವಸ್ತುಗಳು ಮನಸ್ಥಿತಿಯನ್ನು ಹದಗೊಳಿಸುವ, ಒತ್ತಡ ನಿವಾರಿಸುವ ಬಲವಾದ ಸಾಧನ ಎಂದು ನಮ್ಮಲ್ಲಿ ಬಹುತೇಕರು ಆಲೋಚಿಸುತ್ತಾರೆ. ಮಾನವನ ಮಿದುಳಿನ ಕಾರ್ಯ ವಿಧಾನವನ್ನು ಬದಲಾಯಿಸುವ ರಾಸಾಯನಿಕಗಳಿಗೆ ಡ್ರಗ್ ಅಥವಾ ಮಾದಕದ್ರವ್ಯ ಎಂದು ಕರೆಯಲಾಗುತ್ತದೆ. ಡ್ರಗ್ ಮಿದುಳಿಗೆ ಪ್ರವೇಶಿಸಿ, ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ್ಗಿಕವಾದ ರಾಸಾಯನಿಕಗಳ ಪ್ರಮಾಣವನ್ನು ಕುಗ್ಗಿಸುತ್ತದೆ. ಕಾಫಿ, ಮದ್ಯ, ತಂಬಾಕು, ದೀರ್ಘಕಾಲದ ಔಷಧ ಸೇವನೆ, ಮನೋಲ್ಲಾಸಕ್ಕಾಗಿ ಬಳಸುವ ಕೃತಕ ಸಾಧನಗಳು ಮುಂತಾದ ಎಲ್ಲವುಗಳನ್ನು ಡ್ರಗ್ಸ್ ಎಂದು ಕರೆಯಬಹುದು.

ಮಾದಕ ದ್ರವ್ಯ ವ್ಯಸನದ ಆರಂಭ ಹೇಗೆ?: ಮೊದಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದೋ ಮಾದಕದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ದುರ್ಬಲ ವ್ಯಕ್ತಿತ್ವ ಹಾಗೂ ಮನೋಸಾಮರ್ಥ್ಯ ಕಡಿಮೆ ಇದ್ದವರು ಮಾದಕದ್ರವ್ಯ ವ್ಯಸನಿಗಳಾಗುತ್ತಾರೆ. ವ್ಯಸನಿಗಳು ಸೋಮಾರಿಗಳಾಗಿರುವುದರಿಂದ ಅವರ ವರ್ತನೆಯಲ್ಲಿ ಬದಲಾವಣೆ ಸಾಧ್ಯವಿಲ್ಲ.

ರಾಜ್ಯ ಸರ್ಕಾರವು ಮಾದಕ ವಸ್ತು ವಿರುದ್ಧದ ಹೋರಾಟದಲ್ಲಿ ‘zero tolerance’ ನೀತಿಯನ್ನು ಅನುಸರಿಸುತ್ತಿದೆ. Synthetic drugs ತಡೆಯುವುದು ನಮ್ಮ ಮುಂದಿರುವ ಸವಾಲು. ಸೈಬರ್ ಕ್ರೈಂ, ಆರ್ಥಿಕ ಅಪರಾಧ, ಮತ್ತು ಮಾದಕ ವಸ್ತು ನಿಯಂತ್ರಣಕ್ಕೆ 8 CEN (Cyber Crime, Economic offences and Narcotics) ಪೊಲೀಸ್ ಸ್ಟೇಷನ್​ಗಳನ್ನು ಶುರು ಮಾಡಿದ್ದೇವೆ. | ಶ್ರೀರಾಮುಲು ಆರೋಗ್ಯ ಸಚಿವ

ವ್ಯಸನದ ದುಷ್ಪರಿಣಾಮಗಳು: ದೀರ್ಘಕಾಲದ ಡ್ರಗ್ಸ್ ಸೇವೆನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ನಿರ್ಧಾರ, ವರ್ತನೆ, ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗಳಿಗೆ ಒಳಗಾಗಬಹುದು. ಕುಟುಂಬ, ಸ್ನೇಹಿತರು ಅಥವಾ ಮನೆ ಹಾಗೂ ಹೊರಗಿನ ಕೆಲಸಗಳ ಜವಾಬ್ದಾರಿಯ ಕುರಿತು ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ಆರಂಭದಲ್ಲೇ ಇದರ ಬಗ್ಗೆ ಎಚ್ಚರ ವಹಿಸದಿದ್ದರೆ ವ್ಯಸನದಿಂದ ಮುಕ್ತರಾಗುವುದು ಕಷ್ಟಸಾಧ್ಯ. ಆರೋಗ್ಯ ಸಮಸ್ಯೆ: ಮಾದಕ ವ್ಯಸನದಿಂದ ಲಿವರ್ ಸಮಸ್ಯೆ, ಮಿದುಳಿನ ಜೀವಕೋಶಗಳ ಕುಗ್ಗುವಿಕ, ಖಿನ್ನತೆ, ಕಿರಿಕಿರಿ, ಅಧಿಕ ರಕ್ತದೊತ್ತಡ, ಅಜೀರ್ಣ ತೊಂದರೆಗಳು, ಕ್ಯಾನ್ಸರ್, ಹೃದಯ ಸಮಸ್ಯೆ, ಪಾರ್ಶ್ವವಾಯು ತೊಂದರೆ, ನರ ದೌರ್ಬಲ್ಯ, ಅಕಾಲಿಕ ಮುಪ್ಪು ಮಹಿಳೆಯರಲ್ಲಿ ಭ್ರೂಣಕ್ಕೆ ತೊಂದರೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಆರೋಗ್ಯ ಇಲಾಖೆಯ ಅಧೀನದ ಔಷಧ ನಿಯಂತ್ರಣ ಇಲಾಖೆಯು 1956ರಿಂದ ಕಾರ್ಯನಿರ್ವಹಿಸುತ್ತಿದ್ದು, ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ಹಾಗೂ ಅದರ ಅಡಿಯಲ್ಲಿರುವ ನಿಯಮಗಳ ನಿಬಂಧನೆಗಳನ್ನು ಜಾರಿಗೊಳಿಸಿದೆ. ಅದರ ಮುಖೇನ ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜುರಾಗುತ್ತಿರುವ ಔಷಧ ಹಾಗೂ ಕಾಂತಿವರ್ಧಕಗಳ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳುತ್ತಿದೆ. | ಭಾಗೋಜಿ ಟಿ.ಖಾನಾಪುರೆ                                       ರಾಜ್ಯ ಔಷಧ ನಿಯಂತ್ರಕ, ಔಷಧ ನಿಯಂತ್ರಣ ಇಲಾಖೆ ಪ್ರಸ್ತುತ ದಿನಗಳಲ್ಲಿ ಮಾದಕ ವಸ್ತು ಸೇವನೆಗೆ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಅಗತ್ಯತೆ ಇದೆ. ಆರಂಭದಲ್ಲಿ ಸಿಗರೇಟ್, ತಂಬಾಕು ಉತ್ಪನ್ನಗಳ ಸೇವಿಸುವುದನ್ನು ಅಂಟಿಸಿಕೊಳ್ಳುತ್ತಾರೆ. ಓದು, ಕ್ರೀಡೆ, ಮುಂತಾದ ಚಟುವಟಿಕೆಗಳ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಮಕ್ಕಳ ದೈನಂದಿನ ಚಟುವಟಿಕೆ ಮೇಲೆ ಪೋಷಕರು ನಿಗಾವಹಿಸುವುದಲ್ಲದೇ, ಅವರೊಂದಿಗೆ ಹೆಚ್ಚು ಕಾಲ ಕಳೆಯಬೇಕು. | ಪ್ರತಾಪ್ ಮಿಶ್ರಾ ಜೆಲ್​ಟೆಕ್ ಸಂಸ್ಥೆ ಮುಖ್ಯಸ್ಥ

ರಾಜ್ಯದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಡ್ರಗ್ ಮಾಫಿಯಾ!: ವಿದೇಶ, ಹೊರ ರಾಜ್ಯಗಳಲ್ಲಿ ನಡೆಯುತ್ತಿದ್ದ ಡ್ರಗ್ಸ್ ಮಾಫಿಯಾ ರಾಜ್ಯಕ್ಕೂ ಕಾಲಿಟ್ಟಿದೆ. ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಕಣ್ತಪ್ಪಿಸಿ, ವಾರ್ಷಿಕ ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್​ಗಳನ್ನು ರಾಜಧಾನಿಗೆ ಆಮದು ಮಾಡಿಕೊಂಡು ವಿವಿಧೆಡೆ ರವಾನಿಸುವ ವ್ಯವಸ್ಥಿತ ಜಾಲ ರಾಜ್ಯದಲ್ಲಿ ಸಕ್ರೀಯವಾಗಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ 4,587 ಪ್ರಕರಣ ರಾಜ್ಯದಲ್ಲಿ ದಾಖಲಾಗಿದ್ದು, ಅಂದಾಜು 1.5 ಸಾವಿರ ಕೋಟಿ ಮೌಲ್ಯದ 780 ಕೆ.ಜಿ. ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಡ್ರಗ್ಸ್ ದಂಧೆ ನಡೆಸುತ್ತಿದ್ದ 480ಕ್ಕೂ ಅಧಿಕ ಪೆಡ್ಲರ್ಸ್ ಅನ್ನು ಪೊಲೀಸರು ಸೆರೆ ಹಿಡಿದಿರುವ ಅಂಶ ಇದಕ್ಕೆ ಪುಷ್ಠಿ ನೀಡುತ್ತದೆ. 2016ರಲ್ಲಿ ದಾಖಲಾಗಿದ್ದ 653 ಪ್ರಕರಣ, 2018ರಲ್ಲಿ 1,031ಕ್ಕೆ ಏರಿಕೆಯಾಗಿದೆ. 2019ರಲ್ಲಿ ಇದರ ಪ್ರಮಾಣ 1,660ಕ್ಕೆ ಹೆಚ್ಚಿದ್ದು, 2020ರ ಕಳೆದ ನಾಲ್ಕೇ ತಿಂಗಳಿನಲ್ಲಿ 769 ಪ್ರಕರಣ ದಾಖಲಾಗಿದೆ. ಹೊಸ ಹೊಸ ಡ್ರಗ್ಸ್​ಗಳು ವಿದೇಶದಿಂದ ರಾಜಧಾನಿಗೆ ಕಾಲಿಡುತ್ತಲೇ ಇದ್ದು, ಇದಕ್ಕೆ ರಾಜ್ಯದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ. ಟೆಕ್ಕಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ವರ್ಗದ ಯುವಕ, ಯುವತಿಯರೇ ಈ ದಂಧೆಕೋರರ ಟಾರ್ಗೆಟ್. ಎಲ್​ಎಸ್​ಡಿ, ಕೊಕೇನ್, ಬ್ರೌನ್​ಶುಗರ್, ಹಾಶಿಸ್​ನಂತಹ ಬೆಲೆ ಬಾಳುವ ಡ್ರಗ್ಸ್ ಮೈಕ್ರೋ ಗ್ರಾಂ ಲೆಕ್ಕದಲ್ಲಿ ಮಾರಾಟವಾಗುತ್ತಿದೆ. ಕಿಟ್ಟಿ ಪಾರ್ಟಿಗಳು, ಪಬ್, ಡ್ಯಾನ್ಸ್​ಬಾರ್​ಗಳಲ್ಲೂ ಇದರ ಘಾಟು ಹೆಚ್ಚಾಗಿದೆ. ಇದನ್ನು ಸೇವಿಸಿದ ವ್ಯಕ್ತಿ ಕನಿಷ್ಠ 12ರಿಂದ 13 ಗಂಟೆಗಳ ಕಾಲ ಪ್ರಜ್ಞಾವಸ್ಥೆಯಲ್ಲಿ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಯುವಜನತೆ, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಡ್ರಗ್ಸ್​ನಿಂದ ಆರೋಗ್ಯ ಮತ್ತು ಭವಿಷ್ಯದ ಮೇಲಾಗುವ ಪರಿಣಾಮಗಳ ಕುರಿತಂತೆ ಯುವಜನರಲ್ಲಿ ಜಾಗೃತಿ ಮೂಡಿಸ ಬೇಕಿದೆ. ಅದರ ಜತೆಗೆ ಪಾಲಕರಿಗೂ ಅದರ ಬಗ್ಗೆ ಅರಿವು ಮೂಡಿಸಬೇಕು. ಪಾಲಕರು ಆಗಾಗ ಮಕ್ಕಳ ನಡವಳಿಕೆ ಬಗ್ಗೆ ನಿಗಾವಹಿಸಬೇಕು. ಸರ್ಕಾರಗಳು ಡ್ರಗ್ಸ್ ಎಲ್ಲಿಂದ ಬರುತ್ತದೆ ಎಂಬುದನ್ನು ಪತ್ತೆ ಮಾಡಿ, ಅದರ ನಿಮೂಲನೆಗೆ ಕಠಿಣ ಕ್ರಮ ಕೈಗೊಳ್ಳಬೇಕು. | ಡಾ. ವಿಜೇಂದ್ರಪ್ರಕಾಶ್ ಹಿಮಾಲಯ ಡ್ರಗ್ ಕಂಪನಿ, ಪ್ರಧಾನ ವ್ಯವಸ್ಥಾಪಕ

ಮಾದಕ ವಸ್ತು ಸೇವನೆಯು ಮಾನಸಿಕವಾಗಿಯಷ್ಟೇ ಅಲ್ಲದೆ ದೈಹಿಕವಾಗಿಯೂ ವ್ಯಕ್ತಿಯನ್ನು ಬಾಧಿಸುತ್ತದೆ. ಪ್ರಸ್ತುತ ನಮ್ಮ ದೇಶದ ಶೇ.20 ಯುವಜನರು ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದು, ಇದು ಮುಂದುವರಿದರೆ ದೇಶದ ಭವಿಷ್ಯಕ್ಕೇ ಅಪಾಯವಿದೆ. ವಿದ್ಯಾರ್ಥಿಗಳು ಒಮ್ಮೆ ಬಳಕೆ ಆರಂಭಿಸಿದರೆ ಅದರ ದಾಸರಾಗುತ್ತಾರೆ. ಶಿಕ್ಷಣ ಸಂಸ್ಥೆಗಳ ಜತೆಗೆ ಮನೆಗಳಲ್ಲಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. | ಸುನೀಲ್ ಕೈಮಲ್  ವ್ಯವಸ್ಥಾಪಕ ನಿರ್ದೇಶಕ, ಕೆಎಪಿಎಲ್ ಮಾದಕ ವಸ್ತು ಸೇವನೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಸೇವನೆಯಿಂದ ಮಾನಸಿಕ ಖಿನ್ನತೆ ಉಂಟಾಗಿ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ವೈದ್ಯರ ಸಲಹೆ ಪಡೆದು ಮಾತ್ರೆಗಳನ್ನು ಸೇವಿಸುವುದು ಉತ್ತಮ. | ಸುನೀಲ್ ಮುಂದ್ರಾ,                                               ವ್ಯವಸ್ಥಾಪಕ ನಿರ್ದೇಶ,  ನ್ಯಾಚುರಲ್ ಕ್ಯಾಪ್ಸುಲ್​ ಅಗತ್ಯವಿದ್ದಾಗ ಮಾತ್ರ ವೈದ್ಯರ ಸಲಹೆ ಮೇರೆಗೆ ಔಷಧ ಪಡೆದುಕೊಳ್ಳಬೇಕೇ ಹೊರತು, ಅನವಶ್ಯಕವಾಗಿ ತೆಗೆದುಕೊಳ್ಳ ಬಾರದು. ಕುಡಿತದಿಂದ ಹಿಡಿದು ಮಾದಕ ವಸ್ತುಗಳ ವ್ಯಸನಿಗಳ ತನಕ ದುಷ್ಚಟಗಳನ್ನು ದೂರ ಮಾಡಿಸಲು ಎಲ್ಲರೂ ಸಂಘಟಿತ ಪ್ರಯತ್ನ ಮಾಡಬೇಕಿದೆ. | ಜಾವೇದ್ ಆಖ್ತರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಕಾನೂನು ಬಾಹಿರವಾಗಿ ಮಾದಕವಸ್ತುಗಳ ಮಾರಾಟ ಮಾಡುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕು.ಯುವಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳನ್ನು ಸೇವಿಸಿ ವ್ಯಸನಿಗಳಾಗುತ್ತಿರುವುದು ದುರಾದೃಷ್ಟಕರ. ಹೀಗಾಗಿ, ನಾವೆಲ್ಲರೂ ಸೇರಿ ಯುವಕರಿಗೆ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ವಣಕ್ಕೆ ಮುಂದಾಗಬೇಕಿದೆ. | ಆರ್.ಎಲ್. ಪೈನಚೆಮ ಪುರವನಕ ಪುರೋಹಿತ (ಸಿಒಒ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net