

ಬೆಂಗಳೂರು: ಶಿಕ್ಷಣ, ಉದ್ಯೋಗದಲ್ಲಿ ಒಳಮೀಸಲಾತಿ ಆದೇಶವಾಗಿದ್ದು, ನೇರ ನೇಮಕಾತಿ ಪ್ರಕ್ರಿಯೆ ಶುರುವಾಗಿವೆ. ಅದೇ ರೀತಿ ಮುಂಬಡ್ತಿಗೆ ಒಳಮೀಸಲಾತಿ ಅನ್ವಯವಾಗಲಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಭಯ ನೀಡಿದ್ದಾರೆ.
ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ಮಾದಿಗ ಮತ್ತಿತರ ಸಮುದಾಯಗಳ ನಿಯೋಗದ ಅಹವಾಲು ಆಲಿಸಿದರು. ಬಡ್ತಿಯಲ್ಲಿ ಒಳಮೀಸಲಾತಿ ಆದೇಶ ಹೊರಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಿಯೋಗವು ಅಹವಾಲು ಸಲ್ಲಿಸಿ, ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಬಳಿಕವೂ ಬಹಳಷ್ಟು ಗೊಂದಲ ಹುಟ್ಟುಹಾಕುವ ಕಾರ್ಯ ನಡೆಯುತ್ತಿದೆ. ಅದರಲ್ಲೂ ಬಡ್ತಿಯಲ್ಲಿ ಒಳಮೀಸಲಾತಿ ಇಲ್ಲವೆಂಬ ಸರ್ಕಾರಿ ನೌಕರರಲ್ಲಿನ ಗೊಂದಲ, ಆತಂಕ ನಿವಾರಿಸಲು ಕೋರಿತು.
ಮಾದಿಗ ಮತ್ತಿತರ ಸಮುದಾಯಗಳ ಸರ್ಕಾರಿ ನೌಕರರಲ್ಲಿ ದುಗುಡವಿದೆ. ಒಳಮೀಸಲಾತಿ ಆದೇಶದ
ಶಿರೀತಿ ಬಡ್ತಿಯಲ್ಲೂ ಒಳಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿ ಸಂಶಯ ನಿವಾರಿಸಬೇಕು. ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಸಮುದಾಯಗಳಿಗೆ ಮೂಲ ಜಾತಿ ಪ್ರಮಾಣಪತ್ರ ನೀಡುವುದಕ್ಕೂ ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿತು.
ನಿಯೋಗದಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ, ಒಳಮೀಸಲಾತಿ ಹೋರಾಟಗಾರರಾದ ಎಸ್.ಮಾರೆಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ ಕೌತಾಳ್, ಹನುಮೇಶ್ ಗುಂಡೂರು, ಮಾದಿಗ ನೌಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಇನ್ನಿತರರು ಇದ್ದರು.