ಒಳ ಮೀಸಲಾತಿ ವಿಳಂಬ, ಅರೆ ಬೆತ್ತಲೆಯಾಗಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದ ಹೋರಾಟಗಾರರು

IMG_20250801_205635.jpg
Published on

ಚಿಕ್ಕಬಳ್ಳಾಪುರ: ಒಳ ಮೀಸಲಾತಿಗಾಗಿ ಆಗ್ರಹಿಸಿ ಕೈಗೊಂಡ ಅರೆ ಬೆತ್ತಲೆ ಹೋರಾಟದ ವೇಳೆ ಧಿಕ್ಕಾರದ ಘೋಷಣೆಗಳೊಂದಿಗೆ ಹೋರಾಟಗಾರರು
ಜಿಲ್ಲಾಡಳಿತ ಭವನಕ್ಕೆ ಶುಕ್ರವಾರ ಮುತ್ತಿಗೆ ಹಾಕಿದರು.
ಕರ್ನಾಟಕ ಮಾದಿಗ ಮಹಾಸಭಾ-ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಅರೆ ಬೆತ್ತಲೆಯಾಗಿ ಧರಣಿ ಕುಳಿತು ಪ್ರತಿಭಟನಾಕಾರರು ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿದರು. ಬಳಿಕ ಘೋಷಣೆಗಳೊಂದಿಗೆ ಮುತ್ತಿಗೆ ಹಾಕಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಒಳ ಪ್ರವೇಶಿಸದಂತೆ ತಡೆದರು. ಮುನ್ನುಗಿ ಹೋಗುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡರು. ಇದು ಪರಸ್ಪರ ಮಾತಿನ ಚಕಮಕಿಗೆ ಕಾರಣವಾಯಿತು. ಬಳಿಕ ಹಿರಿಯ ಅಧಿಕಾರಿಗಳ ಮನವೊಲಿಕೆಯಿಂದ ಮನವಿ ಪತ್ರ ಸಲ್ಲಿಸಿ, ಒಂದು ದಿನದ ಹೋರಾಟಕ್ಕೆ ತೆರೆ ಎಳೆಯಲಾಯಿತು.
ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಆಯಾ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲು ಸೂಚಿಸಿದೆ. ಈ  ತೀರ್ಪು ಬಂದು ಜೂ.೧ ೨೦೨೫ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಆದರೂ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ಮೀನಾಮೇಷ ಎಣಿಸುತ್ತಿದ್ದು ನಾಗಮೋಹನ್‌ದಾಸ್ ಸಮಿತಿ ರಚನೆ, ವರದಿ ಸ್ವೀಕಾರಕ್ಕೆ ಸೀಮಿತವಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.  ೧೦೧ ಪರಿಶಿಷ್ಟ ಸಮುದಾಯಗಳಿಗೆ ಸಮಾನ ಅವಕಾಶ ನೀಡಲು ಒಳಮೀಸಲಾತಿ ಜಾರಿಗಾಗಿ  ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ಸಮುದಾಯವು ಕಳೆದ ೩೫ ವರ್ಷಗಳಿಂದ ನಾನಾ ಹೋರಾಟಗಳನ್ನು ನಡೆಸಿದೆ.  ಆದರೂ ರಾಜ್ಯ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಹೋರಾಟಗಾರ ತಾಳ್ಮೆಗೂ ಮಿತಿಯಿದೆ. ಇಲ್ಲಿಯವರೆಗೆ ಹೋರಾಟದ ರೂಪುರೇಷೆಗಳನ್ನು ಮೊದಲೇ ಬಹಿರಂಗಗೊಳಿಸಲಾಗಿತ್ತಿತ್ತು. ಮುಂಬರುವ ದಿನಗಳಲ್ಲಿ ಏನನ್ನೂ ಹೇಳದೇ ಹೋರಾಟಗಳನ್ನು ಕೈಗೊಳ್ಳಲಾಗುತ್ತದೆ. ಬೇಡಿಕೆ ಈಡೇರುವವರೆಗೂ ಪಟ್ಟು ಬಿಡುವುದಿಲ್ಲ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದರಿಂದ ಮಾದಿಗ ಸಮುದಾಯವು ವಿಶೇಷ ಸೌಲಭ್ಯಗಳಿಂದ ವಂಚಿತಗೊಂಡಿದ್ದು ಅದರಲ್ಲೂ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.
ನ್ಯಾಯಾಲಯದ ತೀರ್ಪು ಬಂದ ಕೂಡಲೇ ಒಳ ಮೀಸಲಾತಿ ಕಲ್ಪಿಸುವುದರ ಬಗ್ಗೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿತ್ತು. ಈಗ ಅಧಿಕಾರದಲ್ಲಿದ್ದರೂ ಏಕೆ ಜಾರಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.     
ಈಗಾಗಲೇ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ವಿಶೇಷ ಆದ್ಯತೆ ನೀಡಿ, ಆಯಾ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಿದ್ದು ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿ ಹಾಕಿದೆ. ಆದರೆ,  ಕರ್ನಾಟಕ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು ಪರಿಶಿಷ್ಟ ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾದಿಗ ಮತ್ತು ೨೯ ಉಪಜಾತಿಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ. ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಬೇಡಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. 
ಪ್ರತಿಭಟನೆಯಲ್ಲಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಯೋಜನಾ ಪ್ರಾಧಿಕಾರದ ಸದಸ್ಯೆ ನಾರಾಯಣಮ್ಮ, ಕರ್ನಾಟಕ ಮಾದಿಗ ಮಹಾಸಭಾ- ದಲಿತ ಸಂಘಟನೆಗಳ ಒಕ್ಕೂಟದ ಡಿ.ವಿ.ನಾರಾಯಣಸ್ವಾಮಿ, ಈಧರೆ ಪ್ರಕಾಶ್, ನಾಗರಾಜ್, ನಾಗೇಶ್, ವಿಜಯನಾರಸಿಂಹ,ಕಾಳಪ್ಪ,ಮಹದೇವ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net