

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸರ್ವ-ಧರ್ಮ ಸೌಹಾರ್ದ ಭಾರತೀಯರಲ್ಲಿದೆ. ಪ್ರತಿ ಧರ್ಮದ ಮುಖ್ಯ ಧ್ಯೇಯ ನೈತಿವಾಗಿ ಮತ್ತು ಪರಿಶುದ್ಧವಾಗಿ ಬದುಕನ್ನು ನಡೆಸುವುದು. ಎಲ್ಲ ಧರ್ಮ ಗ್ರಂಥಗಳು ಹೇಳಿರುವುದು ಸಮಾಜದಲ್ಲಿರುವ ಕೆಟ್ಟ ಗುಣ ಯಾವ ರೀತಿಯಲ್ಲಿ ತೊಡೆದು ಹಾಕಬಹುದು ಎಂಬುದು ಅರಿತು ಬದುಕಬೇಕು ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸರ್ವ-ಧರ್ಮ ಅರಿವು ಸಮ್ಮಿಲನ 2025 ಉದ್ಘಾಟಿಸಿ ಮಾತನಾಡಿದರು.
ಫಾ.ಮೆಲ್ವಿನ್ ನೊರೊನ್ಹಾ ಸಂದೇಶ ನೀಡಿ, ಪ್ರೀತಿ, ನೀತಿ, ಮಾನವೀಯತೆ ಪ್ರತಿಬಿಂಬವೇ ಕ್ರೈಸ್ತ ಧರ್ಮ. ಕರುಣೆ ಇಲ್ಲದ ಧರ್ಮ ಜಗತ್ತಿಗೆ ಯಾವ ಸಂದೇಶವನ್ನೂ ಕೊಡಲು ಸಾಧ್ಯವಿಲ್ಲ. ಹಸಿದಾಗ ಅನ್ನ, ದಣಿದಾಗ ನೀರು ಕೊಡುವುದೇ ನಿಜವಾದ ಧರ್ಮ ಎಂದರು.
ಎಸ್.ಎನ್.ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಡಾ.ಎಸ್.ಪಿ.ಗುರುದಾಸ್ ಸಂದೇಶ ನೀಡಿ, ಧರ್ಮಗಳಲ್ಲಿರುವ ಸತ್ ವಿಚಾರಗಳನ್ನರಿತು ಬದುಕಿನಲ್ಲಿ ಅಳವಡಿಸಿ ನಡೆಯುವುದೇ ಧರ್ಮದ ರಕ್ಷಣೆ. ಎಲ್ಲ ಧರ್ಮಗಳ ಅಂತಿಮ ಸಂದೇಶ ಮಾನವ ಜನಾಂಗದ ಕಲ್ಯಾಣವೇ ಆಗಿದೆ. ಅಹಂಕಾರ, ದರ್ಪ ಬಿಟ್ಟು ಪ್ರತಿಫಲಾಪೇಕ್ಷೆ ಇಲ್ಲದೆ ಬದುಕು ಸಾಗಿಸಿದರೆ, ನೈಜಾರ್ಥದಲ್ಲಿ ಧರ್ಮದ ಪಾಲನೆಯಾದಂತೆ ಎಂದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ.ಸಂಪತ್ ಕುಮಾರ್, ಎಕ್ಸಲೆಂಟ್ ಪಿಯು ಕಾಲೇಜು ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಜಯಶೀಲ ಹಾಗೂ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಸಮಾಜಕ್ಕಾಗಿ ಬದುಕಿ, ಅಹಂಕಾರ ತ್ಯಜಿಸಿ, ಶಾಂತಿಯ ಮಂತ್ರ ಪಠಿಸಿ, ಪರೋಪಕಾರದ ಮೂಲಕ ಸಮಾಜದ ಆಸ್ತಿಗಳಾಗಿ, ಈ ಕಾರ್ಯಕ್ರಮದ ಸಂದೇಶ ಜೀವನದುದ್ದಕ್ಕೂ ಅಳವಡಿಸಿ ದೇಶದ ಸತ್ಪ್ರಜೆಗಳಾಗಿ ವಿದ್ಯಾರ್ಥಿಗಳು ಬಾಳಬೇಕು. ಯುವರಾಜ್ ಜೈನ್ ಅಧ್ಯಕ್ಷ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಪರೋಪಕಾರ ಮಾಡಿ, ದೌರ್ಜನ್ಯ ಬೇಡ ಎಲ್ಲರಿಗೂ ಒಳಿತು ಮಾಡಿ ಎನ್ನುವುದೇ ಕುರಾನ್‌ನ ಮೂಲಮಂತ್ರ. ಇಂತಹ ಸರ್ವಧರ್ಮ ಅರಿವು ಕಾರ್ಯಕ್ರಮ ಯುವ ಜನತೆಗೆ ಹತ್ತು ವರ್ಷಗಳಿಂದ ನೀಡುವ ಮೂಲಕ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿ ಡಾ.ಅಬ್ದುಲ್ ರಶೀದ್ ಝೈನೀ ಸಖಾಫಿ ಅಧ್ಯಕ್ಷ, ಮಂಗಳೂರಿನ ಮಸ್ನವೀ ಅಕಾಡೆಮಿ