ಮಾವಿನಕೊಪ್ಪದಲ್ಲಿ ಶೀತಲೀಕರಣ ಘಟಕ ಸ್ಥಾಪನೆ

Solar
Published on

ಶಿರಸಿ: ತಾಲೂಕಿನ ಮಾವಿನಕೊಪ್ಪದಲ್ಲಿ ರೈತರೊಬ್ಬರು ರೈತರಿಗಾಗಿ ಸೋಲಾರ್ ಶೀತಲೀಕರಣ ಘಟಕ ಸ್ಥಾಪಿಸಿದ್ದು, ಇದಕ್ಕೆ ಸೆಲ್ಕೋ ಸೋಲಾರ್ ಬೆಂಬಲವಾಗಿ ನಿಂತಿದೆ.

ಗ್ರಾಮದ ವಿಕಾಸ ಹೆಗಡೆ ಎಂಬುವರ ಮನೆಯಂಗಳದಲ್ಲಿ ಸೌರಶಕ್ತಿ ಶೀತಲೀಕರಣ ಘಟಕ ನಿರ್ವಿುಸಲಾಗಿದೆ. ಇದಕ್ಕೆ ಸೆಲ್ಕೋ ಸೋಲಾರ್ ಸೌರ ಫಲಕಗಳು, ಯಂತ್ರೋಪಕರಣಗಳನ್ನು ಪೂರೈಸಿದೆ. ಘಟಕಕ್ಕೆ ಒಟ್ಟು 22 ಲಕ್ಷ ರೂ. ವೆಚ್ಚ ತಗುಲಿದೆ.

ಬುಧವಾರ ಘಟಕ ಉದ್ಘಾಟಿಸಿದ ಸೆಲ್ಕೋ ಸೋಲಾರ್ ಮುಖ್ಯಸ್ಥ ಹರೀಶ ಹಂದೆ, ರೈತರ ಉತ್ಪನ್ನ ಸಂಗ್ರಹಕ್ಕೆ ಇಂತಹ ಸಣ್ಣ ಘಟಕದ ಅಗತ್ಯವಿದೆ. ಮೇಘಾಲಯದಲ್ಲಿ ಭೌಗೋಳಿಕ ಪರಿಸ್ಥಿತಿ ವಿಷಮವಾಗಿದ್ದರೂ ಅಲ್ಲಿಯ ಮಹಿಳೆಯರು, ರೈತರು ಇಂತಹ ಘಟಕ ಸ್ಥಾಪಿಸಿ ದರ ಬಂದಾಗ ಬೆಳೆ ಮಾರುವ ಮೂಲಕ ಆರ್ಥಿಕ ಸ್ಥಿತಿ ಉತ್ತಮಗೊಳಿಸಿಕೊಂಡಿದ್ದಾರೆ. ರೈತರು ತಂತ್ರಜ್ಞಾನದೆಡೆ ಸಾಗದಿದ್ದರೆ ಹೊರ ಜಗತ್ತಿನೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ ಕೋಟೆಮನೆ ಮಾತನಾಡಿ, ವಾರ್ಷಿಕವಾಗಿ 2 ಲಕ್ಷ ರೂ. ಅಧಿಕ ಉತ್ಪನ್ನಗಳು ಸಂಗ್ರಹಣೆ ಸಾಧ್ಯವಾಗದೇ ಹಾಳಾಗುತ್ತಿದೆ. ಶೀತಲೀಕರಣ ಘಟಕ ಸ್ಥಾಪಿಸಿದರೂ ಜಿಲ್ಲೆಯ ವಿದ್ಯುತ್ ಅಸಮರ್ಪಕತೆ ದೊಡ್ಡ ಸಮಸ್ಯೆ ಆಗುತ್ತಿತ್ತು. ಜಿಲ್ಲೆಯಲ್ಲಿ ಪ್ರತಿ ವರ್ಷ 10 ಕೋಟಿ ರೂ. ಮೌಲ್ಯದ ಹಲಸಿನ ಬೆಳೆ ಸಂಗ್ರಹ ಸಾಧ್ಯವಾಗದೇ ಹಾಳಾಗುತ್ತದೆ. ಕೊಕಂನಂತಹ ಬೇಡಿಕೆಯ ವಸ್ತು ಸಹ ಸೂಕ್ತ ಸಮಯದಲ್ಲಿ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಸೋಲಾರ್ ಘಟಕ ಸ್ಥಾಪಿಸಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ಸೆಲ್ಕೋ ಸೋಲಾರ್ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಸೆಲ್ಕೋ ಸಂಸ್ಥೆ ಲಾಭಕ್ಕಿಂತ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಬದುಕಲು ಗಾಳಿ ನೀರಿನಂತೆ ಶಕ್ತಿ ಕೂಡ ಅಗತ್ಯವಾಗಿದೆ. ಸೋಲಾರ್ ಶಕ್ತಿ ಸ್ಥಳೀಯವಾಗಿ ಉತ್ಪಾದಿಸಬಹುದಾಗಿದ್ದು, ಅದನ್ನು ಶೀತಲೀಕರಣ ಘಟಕಕ್ಕೆ ಬಳಸಿದರೆ ಈ ತೊಂದರೆ ತಪ್ಪಿಸಬಹುದಾಗಿದೆ ಎಂದರು.

ನೆದರ್​ಲ್ಯಾಂಡ್ ದೇಶದ ಡಬ್ಲ್ಯುಎಚ್ ಒ ಸಂಸ್ಥೆಯ ಝೆಫ್ ಪ್ರಿನ್ಸ್, ವಿಕಾಸ ಹೆಗಡೆ, ಗ್ರಾಮಸ್ಥರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net