ಕಾರ್ಮಾರು ಶ್ರೀ ಮಹಾವಿಷ್ಣು ದೇವರ ಪ್ರತಿಷ್ಠಾಪನೆ

Bdk_Vishnu at Karmaru
Published on

ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಗುರುವಾರ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾವಿಷ್ಣು ದೇವರ ಹಾಗೂ ಪರಿವಾರ ದೇವತಾ ಪ್ರತಿಷ್ಠಾಪನೆ, ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ ನಡೆಯಿತು. ಪ್ರತಿಷ್ಠಾ ವಿಧಿಗಳನ್ನು ಪೂರೈಸಿ ದೇವರಿಗೆ ಗೋವಿನ ದರ್ಶನ ನೀಡಲಾಯಿತು. ಸ್ತೂಪಿಕಾ ಪ್ರತಿಷ್ಠಾಪನೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಹಸ್ರಾರು ಭಗವದ್ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ನಿತ್ಯನೈಮಿತ್ಯಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ, ಅಂಕುರ ಪೂಜೆ, ಮಂಟಪ ಸಂಸ್ಕಾರ, ಸೋಪಾನ ಪೂಜೆ ನಡೆಯಿತು.

ಗೌರವಾಧ್ಯಕ್ಷ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೇವತಾ ಪ್ರತಿಷ್ಠಾಪನೆಯ ವೇಳೆ ಪಾಲ್ಗೊಂಡಿದ್ದರು. ಮಾ.1ರಿಂದ ಆರಂಭವಾದ ಪುನಃಪ್ರತಿಷ್ಠಾಪನೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.9ರಂದು ಸಮಾಪ್ತಿಯಾಗಲಿದೆ. ವಿವಿಧ ಸಂಘ-ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳಿಂದ ಹಸಿರುವಾಣಿ, ಪಾತ್ರೆ ಸಾಮಾಗ್ರಿಗಳು ದಿನನಿತ್ಯ ಹರಿದುಬರುತ್ತಿವೆ. ಮಧ್ಯಾಹ್ನ ಶಾಂಭವಿ ಪ್ರಾಣೇಶ್ ಅವರಿಂದ ಭಕ್ತ ಧ್ರುವರಾಯ ಹರಿಕಥೆ, ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಗಾನ ಮಂಡಳಿ ಅವರಿಂದ ಯಕ್ಷಗಾನ ತಾಳಮದ್ದಳೆ, ವಿದುಷಿ ಲತಾ ಶಶಿಧರನ್ ಕಾಸರಗೋಡು ಅವರ ಶಿಷ್ಯವೃಂದದವರಿಂದ ಭರತನಾಟ್ಯ, ಯಕ್ಷರಂಜಿನಿ ಕಲಾಕೇಂದ್ರ ಬದಿಯಡ್ಕ ಹಾಗೂ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಅವರ ಸಹಯೋಗದೊಂದಿಗೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net