ಕುಂದಾಪುರ ಪುರಸಭೆ ರಸ್ತೆಯಲ್ಲಿ ಹಂಪ್ ಅಳವಡಿಕೆ

gan-3
Published on

ಕುಂದಾಪುರ: ಕಳೆದೊಂದು ವರ್ಷದಿಂದ ಭಾರಿ ಚರ್ಚೆಗೆ ಕಾರಣವಾಗಿದ್ದ ಕುಂದಾಪುರ ಪುರಸಭೆ ರಸ್ತೆಯಲ್ಲಿ ಹಂಪ್ ಅಳವಡಿಕೆ ವಿಚಾರಕ್ಕೆ ತೆರೆ ಎಳೆಯಲಾಗಿದ್ದು, ಕುಂದಾಪುರ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ತೆಗೆಯಲಾದ ಹಂಪ್‌ಗಳ ಪೈಕಿ ಕೆಲವೆಡೆ ಮತ್ತೆ ಶುಕ್ರವಾರ ರಾತ್ರಿ ಏಕಾಏಕಿ ಹಂಪ್ ಅಳವಡಿಸಲಾಗಿದೆ.

ಪುರಸಭೆ ವ್ಯಾಪ್ತಿಯ ಪವಿತ್ರ ಡಿಜಿಟಲ್ ಬಳಿ ಹೊಸ ಬಸ್ ನಿಲ್ದಾಣದ ಸಮೀಪ, ಚಿಕ್ಕನ್‌ಸ್ಟಾಲ್ ರಸ್ತೆಗೆ ತೆರಳುವ ಪನ್ನೀರ್ ಜುವೆಲ್ಲರ್ಸ್‌ ಬಳಿ ಎರಡು ಕಡೆಗಳಲ್ಲಿ ಪುರಸಭೆ ವತಿಯಿಂದ ಹಂಪ್ ಹಾಕಲಾಗಿದೆ. ಈ ಹಿಂದೆ ಎಲ್ಲೆಲ್ಲಿ ತೆರವಾಗಿತ್ತೋ ಅಲ್ಲ್ಲಿ ಹಂಪ್‌ಗಳನ್ನು ಹಾಕಲು ಪುರಸಭೆ ಮುಂದಾಗಿದೆ. ಶುಕ್ರವಾರ ರಾತ್ರಿ ಮತ್ತೆ ನಗರದ ಮುಖ್ಯ ರಸ್ತೆಯಲ್ಲಿ ಹಂಪ್ ಅಳವಡಿಸುವ ಕಾರ್ಯ ಆರಂಭಿಸಿದ್ದು, ಮಳೆ ಬಂದ ಕಾರಣಕ್ಕೆ ಎರಡು ಕಡೆ ಮಾತ್ರ ಅಳವಡಿಸಲಾಗಿದೆ.

ಕಳೆದ ವರ್ಷ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವದ ಹಿನ್ನೆಲೆಯಲ್ಲಿ ಈ ಹಂಪ್‌ಗಳನ್ನು ತೆರವು ಮಾಡಲಾಗಿತ್ತು. ಆ ಬಳಿಕ ಈ ಹಂಪ್‌ಗಳನ್ನು ಹಾಕಿರಲಿಲ್ಲ. ಸಾರ್ವಜನಿಕರು ಪುರಸಭೆಗೆ ಈ ಬಗ್ಗೆ ಒತ್ತಾಯಿಸಿದ್ದರೂ, ಹಂಪ್ ಅಳವಡಿಸಲು ಮುಂದಾಗಿರಲಿಲ್ಲ. ಈ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಪ್ರತಿಭಟನೆ ನಡೆದಿತ್ತು. ಈಗ ಹಂಪ್‌ಗಳನ್ನು ಅಳವಡಿಸಿದ್ದು, ಜನ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಪುರಸಭೆಯಿಂದ ಮುಖ್ಯ ರಸ್ತೆಗೆ ಹಂಪ್

ನಗರದ ಮುಖ್ಯ ರಸ್ತೆಯಲ್ಲಿ ಹಂಪ್‌ಗಳನ್ನು ಸಂಪೂರ್ಣವಾಗಿ ತೆರವು ಮಾಡಬೇಕು ಅನ್ನುವುದಾಗಿ ಕೆಲವರು ಒತ್ತಾಯಿಸಿದ್ದರೆ, ಇನ್ನು ಕೆಲವರು ಹಂಪ್‌ಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಕೆಲವರು ಆಗ್ರಹಿಸಿದ್ದರು. ಇನ್ನು ಕೆಲವರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ನಗರದ ಎಲ್ಲ ಒಳ ರಸ್ತೆಗಳಿಗೆ ಹಂಪ್ ಅಳವಡಿಸಿದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪರ-ವಿರೋಧದ ನಡುವೆ ಈಗ ಪುರಸಭೆಯಿಂದ ಮುಖ್ಯ ರಸ್ತೆಗೆ ಹಂಪ್‌ಗಳನ್ನು ಮತ್ತೆ ಹಾಕಲಾಗಿದೆ.

ನಗರದ ಮುಖ್ಯ ರಸ್ತೆಯಲ್ಲಿ ಈ ಹಿಂದೆ ಎಲ್ಲೆಲ್ಲ ಹಂಪ್‌ಗಳನ್ನು ತೆರವು ಮಾಡಲಾಗಿದೆಯೋ ಅಲ್ಲಿ ಮತ್ತೆ ಹಂಪ್‌ಗಳನ್ನು ಅಳವಡಿಸಲಾಗುತ್ತಿದೆ. ಮಳೆಯ ಕಾರಣ ಎಲ್ಲ ಕಡೆ ಒಂದೇ ದಿನ ಹಾಕಲು ಆಗಿಲ್ಲ. ಸಾರ್ವಜನಿಕರ ಬೇಡಿಕೆಯಂತೆ ಎಲ್ಲ ಕಡೆಗಳಿಗೆ ಹಂಪ್ ಹಾಕಲಾಗುವುದು. -ಆನಂದ್ ಜೆ., ಪುರಸಭೆ ಮುಖ್ಯಾಧಿಕಾರಿ ಕುಂದಾಪುರ https://www.vijayavani.net/application-invitation-for-diploma-engineering-course https://www.vijayavani.net/data-entry-operator-post-reduced

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net