ಜಗದೀಪ್ ಧನಕರ್ ದಿಢೀರ್​ ರಾಜೀನಾಮೆಗೆ ಇದೇ ಕಾರಣ? ಕಾಂಗ್ರೆಸ್​ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ವಿವಾದ! Jagdeep Dhankhar

Jagdeep Dhankhar
Published on

Jagdeep Dhankhar : ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅನಿರೀಕ್ಷಿತ ರಾಜೀನಾಮೆಯ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಕೇಂದ್ರ ಸರ್ಕಾರದ ಪ್ರಮುಖ ಸಚಿವರಾದ ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು ಅವರು ನಿರ್ಣಾಯಕ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಗೈರುಹಾಜರಾಗಿರುವುದು ಮತ್ತು ಮೇಲ್ಮನೆಯಲ್ಲಿ ನಡ್ಡಾ ಅವರ ಹೇಳಿಕೆಗಳೇ ರಾಜೀನಾಮೆಗೆ ಕಾರಣ ಎಂದು ವಿಪಕ್ಷಗಳು ಹೇಳಿವೆ.

ಸೋಮವಾರ (ಜುಲೈ 21) ನಡೆದ ಬಿಎಸಿ ಸಭೆಯಲ್ಲಿ ಸದನದ ನಾಯಕ ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರಿಜಿಜು ಅವರ ಅನುಪಸ್ಥಿತಿಯಿಂದ ಧನಕರ್​ ಅವರು ಅಸಮಾಧಾನಗೊಂಡಿದ್ದಾರೆ ಎಂದು ಕಾಂಗ್ರೆಸ್ ವಾದಿಸಿದೆ. ಆದರೆ, ಪ್ರಮುಖ ಸಂಸದೀಯ ಕೆಲಸದಲ್ಲಿ ತಾವು ನಿರತರಾಗಿದ್ದಾಗಿ ಮತ್ತು ಗೈರಿನ ಬಗ್ಗೆ ಮುಂಚಿತವಾಗಿಯೇ ಉಪರಾಷ್ಟ್ರಪತಿಗಳಿಗೆ ತಿಳಿಸಲಾಗಿತ್ತು ಎಂದು ನಡ್ಡಾ ಅವರು ಸಮರ್ಥನೆ ನೀಡಿದ್ದಾರೆ.

ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿಯು ಸರ್ಕಾರಿ ಶಾಸಕಾಂಗ ಮತ್ತು ಇತರ ವ್ಯವಹಾರಗಳಿಗೆ ಸಮಯ ಹಂಚಿಕೆಯನ್ನು ಶಿಫಾರಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮೊದಲ ಸಭೆ ನಿನ್ನೆ (ಜುಲೈ 21) ಮಧ್ಯಾಹ್ನ 12.30ಕ್ಕೆ ನಡೆದಿದ್ದು, ನಡ್ಡಾ ಮತ್ತು ರಿಜಿಜು ಸೇರಿದಂತೆ ಹೆಚ್ಚಿನ ಸದಸ್ಯರು ಆರಂಭದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಕೆಲವು ಚರ್ಚೆಯ ನಂತರ, ಈ ಸಭೆಯನ್ನು ಸಂಜೆ 4.30ಕ್ಕೆ ಮುಂದೂಡಲಾಯಿತು. ಮತ್ತೆ ಸಭೆ ಪುನರಾರಂಭವಾದಾಗ, ಇಬ್ಬರೂ ಸಚಿವರು ಗೈರುಹಾಜರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ, ಕೇಂದ್ರ ಸಚಿವ ಎಲ್. ಮುರುಗನ್ ಎರಡನೇ ಸಭೆಯಲ್ಲಿ ಸರ್ಕಾರವನ್ನು ಪ್ರತಿನಿಧಿಸಿದರು. ಸಭೆಯನ್ನು ಮರುದಿನಕ್ಕೆ ನಿಗದಿಪಡಿಸುವಂತೆ ಮುರುಗನ್ ಅವರು ಧನಕರ್​ ಬಳಿ ವಿನಂತಿಸಿದರು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಸಮಿತಿಯು ಸೋಮವಾರ ಎರಡು ಬಾರಿ ಸಭೆ ಸೇರಿದ್ದು, ಎರಡೂ ಸಭೆಗಳು ಅನಿರ್ದಿಷ್ಟವಾಗಿಯೇ ಉಳಿದಿವೆ.

ಮೊದಲೇ ಮಾಹಿತಿ ನೀಡಿದ್ದೆ

ಬಿಎಸಿ ಸಭೆಯಲ್ಲಿ ತಮ್ಮ ಅನುಪಸ್ಥಿತಿಯ ಬಗ್ಗೆ ಎದ್ದಿರುವ ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಚಿವ ಜೆಪಿ ನಡ್ಡಾ, ಕೆಲವು ಮುಖ್ಯ ಸಂಸದ್ದೀಯ ಕೆಲಸಗಳಿದ್ದ ಕಾರಣ ಸಭೆಯಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದು ನಾವು ಮೊದಲೇ ಉಪರಾಷ್ಟ್ರಪತಿ ಅವರ ಕಚೇರಿಗೆ ಹೇಳಿದ್ದೆವು ಎಂದಿದ್ದಾರೆ. ಇನ್ನು ಪ್ರತಿಪಕ್ಷಗಳ ಗದ್ದಲಕ್ಕೆ ಪ್ರತಿಕ್ರಿಯೆ ನೀಡುವಾಗ ರಾಜ್ಯಸಭೆಯಲ್ಲಿ ಮಾತನಾಡಿದ ನಡ್ಡಾ, ಇಲ್ಲಿ "ಯಾವುದೂ ದಾಖಲಾಗುವುದಿಲ್ಲ ಮತ್ತು ನಾನು ಹೇಳುವುದು ಮಾತ್ರ ದಾಖಲಾಗುತ್ತದೆ ಎಂದಿದ್ದರು. ಇದೇ ಹೇಳಿಕೆಯನ್ನು ಎತ್ತಿ ತೋರಿಸಿರುವ ಕಾಂಗ್ರೆಸ್, ಇದು ಉಪರಾಷ್ಟ್ರಪತಿಗೆ ಮಾಡಿದ "ಅವಮಾನ" ಎಂದು ಕರೆದಿದೆ. ಅಲ್ಲದೆ, ಧನಕರ್​ ಅವರ ದಿಢೀರ್​ ರಾಜೀನಾಮೆಗೆ ಈ ಬೆಳವಣಿಗೆಯೇ ಕಾರಣ ಎಂದು ಆರೋಪಿಸಿದೆ.

ಏನೋ ಗಂಭೀರವಾಗಿ ನಡೆದಿದೆ ಎಂದ ಕಾಂಗ್ರೆಸ್​

ಬಿಎಸಿಯ ಭಾಗವಾಗಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಉಪರಾಷ್ಟ್ರಪತಿ ಧನಕರ್​ಗೆ ಸಚಿವರ ಅನುಪಸ್ಥಿತಿಯ ಬಗ್ಗೆ ವೈಯಕ್ತಿಕವಾಗಿ ತಿಳಿಸಲಾಗಿಲ್ಲ ಮತ್ತು ಸಮಿತಿಯ ಸದಸ್ಯರು ಸಚಿವರು ಬರುವವರೆಗೆ ಕಾಯುತ್ತಿದ್ದರು ಎಂದು ಆರೋಪಿಸಿದ್ದಾರೆ. ಸಭೆಯಲ್ಲಿದ್ದ ನಾವೆಲ್ಲ ನಡ್ಡಾ ಮತ್ತು ರಿಜಿಜು ಬರುವವರೆಗೆ ಕಾಯುತ್ತಿದ್ದೆವು. ಆದರೆ, ಅವರು ಬರಲೇ ಇಲ್ಲ. ಅವರಿಬ್ಬರೂ ತಮ್ಮ ಗೈರು ಹಾಜರಿಯನ್ನು ಜಗದೀಪ್ ಧನಕರ್​ ಅವರಿಗೆ ವೈಯಕ್ತಿಕವಾಗಿ ತಿಳಿಸಿಲ್ಲ. ಇದರಿಂದ ಅವರು ಸರಿಯಾಗಿಯೇ ಆಕ್ರೋಶಗೊಂಡು ಇಂದು (ಜುಲೈ 22) ಮಧ್ಯಾಹ್ನ 1 ಗಂಟೆಗೆ ಬಿಎಸಿಯನ್ನು ಮರು ನಿಗದಿಪಡಿಸಿದರು. ಆದ್ದರಿಂದ ನಿನ್ನೆ ಮಧ್ಯಾಹ್ನ 1 ರಿಂದ ಸಂಜೆ 4.30 ರ ನಡುವೆ "ತುಂಬಾ ಗಂಭೀರವಾದ ಏನೋ" ಸಂಭವಿಸಿದೆ. ನಿನ್ನೆ ಎರಡನೇ ಬಿಎಸಿ ಸಭೆಗೆ ನಡ್ಡಾ ಮತ್ತು ರಿಜಿಜು ಉದ್ದೇಶಪೂರ್ವಕವಾಗಿ ಗೈರುಹಾಜರಾಗಲು ಅದೇ ಕಾರಣ ಎಂದು ಜೈರಾಮ್​ ರಮೇಶ್​ ಮಂಗಳವಾರ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಧನಕರ್​ ಅವರು ಕೊಟ್ಟ ಕಾರಣವೇನು?

ಜಗದೀಪ್ ಧನಕರ್ ಅವರು ಅನಿರೀಕ್ಷಿತ ರೀತಿಯಲ್ಲಿ ತಮ್ಮ ರಾಷ್ಟ್ರಪತಿ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದರು. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅವರು ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡರು. ವಿಪಕ್ಷಗಳಿಂದಿಡಿದು ಸುಪ್ರೀಂ ಕೋರ್ಟ್‌ವರೆಗೆ ಬಹುತೇಕ ಎಲ್ಲರಿಂದಲೂ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಮತ್ತು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿ ಟೀಕೆಗೆ ಗುರಿಯಾಗಿರುವ ಉಪರಾಷ್ಟ್ರಪತಿ ಧನಕರ್ ಅವರ ಹಠಾತ್ ನಿರ್ಧಾರವು ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಅವರು ರಾಜೀನಾಮೆ ನೀಡಲು ಕಾರಣವೇನು ಎಂಬುದರ ಕುರಿತು ಚರ್ಚೆ ನಡೆದಿದೆ. ಆದಾಗ್ಯೂ, ಸೋಮವಾರ ಸಂಜೆ ಅವರು ಆರೋಗ್ಯ ಕಾರಣಗಳಿಂದಾಗಿ ಹುದ್ದೆಯನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದಾರೆ. ನಾನು ನನ್ನ ಆರೋಗ್ಯ ರಕ್ಷಣೆಯತ್ತ ಗಮನ ಹರಿಸಲು ಬಯಸುತ್ತೇನೆ. ಈ ನಿಟ್ಟಿನಲ್ಲಿ, ವೈದ್ಯರ ಸಲಹೆಯ ಮೇರೆಗೆ ನಾನು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಂವಿಧಾನದ 67(ಎ) ವಿಧಿಯ ಪ್ರಕಾರ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ನನ್ನ ನಿರ್ಧಾರ ತಕ್ಷಣವೇ ಜಾರಿಗೆ ಬರಲಿದೆ. ಉಪರಾಷ್ಟ್ರಪತಿ ಹುದ್ದೆಯ ಜವಾಬ್ದಾರಿಗಳನ್ನು ಪೂರೈಸುವ ಅವಧಿಯಲ್ಲಿ ಸಂಪೂರ್ಣ ಬೆಂಬಲ ನೀಡಿದ್ದಕ್ಕಾಗಿ ಅಧ್ಯಕ್ಷ ಮುರ್ಮು, ಪ್ರಧಾನಿ ಮೋದಿ, ಕೇಂದ್ರ ಸಚಿವರು ಮತ್ತು ಎಲ್ಲಾ ಸಂಸತ್ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮೆಲ್ಲರಿಂದ ನನಗೆ ದೊರೆತ ಅಮೂಲ್ಯ ಬೆಂಬಲ ಮತ್ತು ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಉಪರಾಷ್ಟ್ರಪತಿಯಾಗಿದ್ದ ವರ್ಷಗಳಲ್ಲಿ ಅನೇಕ ಅಮೂಲ್ಯ ವಿಷಯಗಳನ್ನು ಕಲಿತಿದ್ದೇನೆ. ನಾನು ಅನೇಕ ಜೀವನ ಅನುಭವಗಳನ್ನು ಗಳಿಸಿದ್ದೇನೆ. ಉಪರಾಷ್ಟ್ರಪತಿಯಾಗಿ, ಇಂತಹ ಪರಿವರ್ತನಾ ಸಮಯದಲ್ಲಿ ದೇಶದ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಗಮನಿಸಿದ್ದೇನೆ. ಈ ಅವಕಾಶವನ್ನು ನಾನು ಗೌರವವೆಂದು ಪರಿಗಣಿಸುತ್ತೇನೆ. ಇದು ನನಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ ಎಂದು ಥನಕರ್​ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಅಧಿಕಾರದಲ್ಲಿರುವಾಗ ರಾಜೀನಾಮೆ ನೀಡಿದ ಮೂರನೇ ಉಪರಾಷ್ಟ್ರಪತಿಯಾಗಿ ಧನಕರ್​ ದಾಖಲೆ ಪುಸ್ತಕಗಳಲ್ಲಿ ದಾಖಲಾಗಿದ್ದಾರೆ. ಈ ಹಿಂದೆ, ವಿವಿ ಗಿರಿ ಮತ್ತು ಆರ್. ವೆಂಕಟರಾಮನ್ ಇದೇ ರೀತಿಯ ರಾಜೀನಾಮೆಗಳನ್ನು ಸಲ್ಲಿಸಿದ್ದರು. ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರೂ ರಾಜೀನಾಮೆ ನೀಡಿದ್ದರು. ಆದರೆ, ಅನಾರೋಗ್ಯದ ಕಾರಣ ಧನಕರ್​ ರಾಜೀನಾಮೆ ನೀಡಿರುವುದು ಗಮನಾರ್ಹ. ಈಗ ಹೊಸ ಉಪರಾಷ್ಟ್ರಪತಿ ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯಸಭೆಯ ಉಪಾಧ್ಯಕ್ಷರಾಗಿ ಈಗಾಗಲೇ ಅಪಾರ ಅನುಭವ ಗಳಿಸಿರುವ ಹರಿವಂಶ್, ಉಪರಾಷ್ಟ್ರಪತಿ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರಬಹುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಧನಕರ್​ ಅವರು 1951 ಮೇ 18ರಂದು ರಾಜಸ್ಥಾನದ ಜುನ್ಜುನು ಜಿಲ್ಲೆಯ ಕಥಾನಾ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ಹಿಂದೆ, ಜನತಾದಳದ ನಂತರ ಅವರು ಕಾಂಗ್ರೆಸ್ ಜೊತೆ ಉತ್ತಮ ಸಂಬಂಧವನ್ನು ಉಳಿಸಿಕೊಂಡರು. ಅವರು 2008 ರಲ್ಲಿ ಬಿಜೆಪಿ ಸೇರಿದರು. ಎಲ್ಎಲ್​ಬಿ ಕೋರ್ಸ್ ನಂತರ, 1979ರ ನವೆಂಬರ್ ತಿಂಗಳಲ್ಲಿ ರಾಜಸ್ಥಾನ ಬಾರ್ ಅಸೋಸಿಯೇಷನ್​ನ ವಕೀಲರಾಗಿ ಉತ್ತಮ ಹೆಸರು ಗಳಿಸಿದರು. ಅವರು ರಾಜಕೀಯದಿಂದ ಸ್ವಲ್ಪ ದೂರವಿದ್ದರು. ಆದಾಗ್ಯೂ, 2019 ರಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲರು ಎನ್​ಡಿಎ ಸರ್ಕಾರಕ್ಕೆ ಅವರ ಹೆಸರನ್ನು ನಾಮನಿರ್ದೇಶನ ಮಾಡಿದಾಗ, ಅವರು ಇದ್ದಕ್ಕಿದ್ದಂತೆ ಎಲ್ಲರ ಗಮನಕ್ಕೆ ಬಂದರು. ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ನಿರಂತರವಾಗಿ ಟೀಕಿಸುತ್ತಿದ್ದರು. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಮಮತಾ ಬ್ಯಾನರ್ಜಿ ಈ ವಿಷಯವನ್ನು ಪದೇ ಪದೇ ಉಲ್ಲೇಖಿಸುತ್ತಿದ್ದರು. ವಿಪಕ್ಷಗಳು ಸೇರಿದಂತೆ ನ್ಯಾಯಾಂಗದಲ್ಲಿನ ನ್ಯೂನತೆಗಳನ್ನು ಅವರು ಆಗಾಗ್ಗೆ ಎತ್ತಿ ತೋರಿಸುತ್ತಿದ್ದರು. 1989ರಲ್ಲಿ ಜನತಾ ದಳದ ಪರವಾಗಿ ಧಜ್ಹಾದ್ ಜುನ್ ಜುನ್ ಲೋಕಸಭಾ ಸ್ಥಾನವನ್ನು ಗೆದ್ದರು. 1990 ರಲ್ಲಿ, ಅವರು ಅಂದಿನ ಪ್ರಧಾನಿ ಚಂದ್ರಶೇಖರ್ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net