ಇತಿಹಾಸದ ಪುಟ ಸೇರಿದ ಐಎನ್​ಎಸ್ ರಜಪೂತ್

INS
Published on

ಬರೋಬ್ಬರಿ 41 ವರ್ಷಗಳ ಕಾಲ ನೌಕಾಪಡೆಯನ್ನಾಳಿದ ಐಎನ್​ಎಸ್ ರಜಪೂತ್ ಸಾಹಸ ಇನ್ನು ನೆನಪು ಮಾತ್ರ. ಶುಕ್ರವಾರ ತನ್ನ ಸೇವೆಯನ್ನು ವೈಜಾಗ್​ನಲ್ಲಿ ಅಧಿಕೃತವಾಗಿ ಕೊನೆಗೊಳಿಸಲಿದೆ. ಕರೊನಾ ಕಾರಣಕ್ಕಾಗಿ ಇದರ ಬೀಳ್ಕೊಡುಗೆ ಸಮಾರಂಭ ಸರಳವಾಗಿ ನಡೆಯಲಿದ್ದು, ಕೆಲವೇ ಅಧಿಕಾರಿಗಳು, ಸಿಬ್ಬಂದಿಗಷ್ಟೇ ಅವಕಾಶ ಸಿಕ್ಕಿದೆ.

41 ವರ್ಷಗಳ ಹಿರಿಯ: ಭಾರತದ ನೌಕಾಪಡೆಯಲ್ಲಿ ರಜಪೂತ್ ವರ್ಗಕ್ಕೆ ತನ್ನದೇ ಆದ ಪ್ರಾಮುಖ್ಯ, ಗೌರವ ವಿದೆ. ಇದೇ ಸರಣಿಗೆ ಸೇರಿದ ಐಎನ್​ಎಸ್ ರಜಪೂತ್ ಕ್ಷಿಪಣಿ ಧ್ವಂಸಕ ಹಾಗೂ ಪ್ರಮುಖ ಹಡಗೆಂದೇ 4 ದಶಕಗಳಿಂದ ಖ್ಯಾತಿ ಪಡೆದಿತ್ತು. 1980ರ ಮೇ 4ರಂದು ಕಾರ್ಯಾರಂಭ ಮಾಡಿದ್ದ ರಜಪೂತ್​ನ ಮೊದಲ ಕಮಾಂಡಿಂಗ್ ಆಫೀಸರ್ ಗುಲಾಬ್ ಮೋಹನ್​ಲಾಲ್ ಹಿರಂದಾನಿ. ಐಎನ್​ಎಸ್ ರಜಪೂತ್ ಹಡಗನ್ನು ನಿಕೋಲೇವ್ ಶಿಪ್​ಯಾರ್ಡ್(ಇಂದಿನ ಉಕ್ರೇನ್)ನಲ್ಲಿ ನಿರ್ವಿುಸಲಾಗಿತ್ತು. ಇದರ ಮೂಲ ಹೆಸರು ನದೇಝುನಿ(ನಿರೀಕ್ಷೆ).

ಬ್ರಹ್ಮೋಸ್ ಕ್ಷಿಪಣಿಗೆ ಆಧಾರ: ಬ್ರಹ್ಮೋಸ್ ಕ್ಷಿಪಣಿ ಕೂಡ ಭಾರತೀಯ ನೌಕಾಪಡೆಯ ಪ್ರಬಲ ಅಸ್ತ್ರ. ಈ ಕ್ಷಿಪಣಿ ಪ್ರಯೋಗಕ್ಕೆ ಸದಾ ವೇದಿಕೆ ಆಗುತ್ತಿದ್ದ ಹಿರಿಮೆಯೂ ಐಎನ್​ಎಸ್ ರಜಪೂತ್​ಗಿತ್ತು. 2007ರ ಮಾರ್ಚ್​ನಲ್ಲಿ ಇದೇ ರಜಪೂತ್​ನಿಂದ ಪೃಥ್ವಿ-3 ಕ್ಷಿಪಣಿ ಉಡಾವಣೆ ಮಾಡಲಾಗಿತ್ತು. 2005ರಲ್ಲಿ ಧನುಷ್ ಕ್ಷಿಪಣಿಯನ್ನು ರಜಪೂತ್ ಹಡಗಿನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.

ಪ್ರಮುಖ ಆಪರೇಷನ್: ರಜಪೂತ್ ಹಡಗನ್ನು ನೌಕಾಪಡೆಯ ಹಲವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಶ್ರೀಲಂಕಾದ ಆಪರೇಷನ್ ಅಮನ್, ಆಪರೇಷನ್ ಪವಾನ್, ಮಾಲ್ಡೀವ್ಸ್​ನಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ನಡೆಸಲಾದ ಆಪರೇಷನ್ ಕಾಕ್ಟಸ್, ಲಕ್ಷದ್ವೀಪದಲ್ಲಿ ನಡೆದ ಆಪರೇಷನ್ ಕ್ರೌನ್ ನೆಸ್ಟ್​ನಲ್ಲಿ ರಜಪೂತ್ ಸೇವೆ, ಕಾರ್ಯವನ್ನು ಭಾರತ ಮರೆಯುವ ಹಾಗಿಲ್ಲ. 41 ವರ್ಷಗಳ ಸುದೀರ್ಘ ಸೇವೆಯಲ್ಲಿ ಈ ಹಡಗು 31 ಕಮಾಂಡಿಂಗ್ ಆಫೀಸರ್ಸ್​ಗಳನ್ನು ಕಂಡಿದೆ.

ಸೇನೆಯ ಅಂಗಸಂಸ್ಥೆ: ಐಎನ್​ಎಸ್ ರಜಪೂತ್ ಭಾರತೀಯ ಸೇನೆ ರೆಜಿಮೆಂಟ್​ನ ಮೊದಲ ಅಂಗಸಂಸ್ಥೆಯ ಸ್ಥಾನಪಡೆದ ದೇಶದ ಮೊದಲ ಹಡಗೆಂಬ ಹೆಗ್ಗಳಿಕೆ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net