

ಬೆಂಗಳೂರು: ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಎಲ್ಲರಿಗೂ ಆರೋಗ್ಯಪೂರ್ಣ, ಉತ್ತಮ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಕಳಕಳಿ ವ್ಯಕ್ತಪಡಿಸಿದ್ದಾರೆ.
ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆಯಲ್ಲಿ ಅಪಸ್ಮಾರ ತಡೆಗಟ್ಟುವಿಕೆ ಮತ್ತು ಸಮಗ್ರ ಆರೈಕೆ (ಇಪಿಐಸಿ) ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವಿನ ಸಹಯೋಗವು ಆರೋಗ್ಯ ರಕ್ಷಣೆಯಲ್ಲಿ ಅವಶ್ಯಕವಾಗಿದ್ದು, ಇದಕ್ಕೆ ಇ.ಪಿ.ಐ.ಸಿ ಯೋಜನೆ ಒಂದು ಉತಮ ಬೆಳವಣಿಗೆಯಾಗಿದೆ. ಅಪಸ್ಮಾರ ಮನುಷ್ಯನನ್ನು ದುರ್ಬಲಗೊಳಿಸುತ್ತವೆ. ಇಪಿಐಸಿಯಂತಹ ಕಾರ್ಯಕ್ರಮಗಳು ದೀನ-ದುರ್ಬಲರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಈ ಯೋಜನೆಯಿಂದ ಆರ್ಥಿಕ ದುರ್ಬಲ ರೋಗಿಗಳಿಗೆ ಪ್ರತಿ ತಿಂಗಳು ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ರೋಗ ಪತ್ತೆ ಮಾಡಿದರೆ ಅದು ಎಂತದ್ದೆ ರೋಗವಾಗಿದ್ದರೂ ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಬಹುದು ಎಂದು ತಿಳಿದು ಸಂತೋಷವಾಗಿದೆ ಎಂದು ನಾರಾಯಣಮೂರ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಆಸ್ಟರ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸಸ್ ಮತ್ತು ಸ್ಪೈನ್ ಕೇರ್ ಗ್ರೂಪ್ ಡೈರೆಕ್ಟರ್ ಪ್ರೊ. ಡಾ. ಸತೀಶ್ ರುದ್ರಪ್ಪ, ನಿರ್ದೇಶಕ ಡಾ. ಸ್ವರೂಪ್ ಗೋಪಾಲ್, ರೋಟರಿ ಜಿಲ್ಲಾ ಗವರ್ನರ್ ಸತೀಶ್ ಮಾಧವನ್ ಮತ್ತಿತರರು ಉಪಸ್ಥಿತರಿದ್ದರು.