ಡ್ರಗ್ಸ್​ ಬಗ್ಗೆ ಸತ್ಯ ಹೇಳಲು ಚಿತ್ರೋದ್ಯಮಿಯೇ ಆಗಬೇಕಾ?; ಗೋವಿಂದುಗೆ ಸಂಬರಗಿ ಪ್ರಶ್ನೆ

collage (1)
Published on

ಪ್ರಶಾಂತ್​ ಸಂಬರಗಿ ಯಾರು, ಅವರಿಗೂ ಸ್ಯಾಂಡಲ್​ವುಡ್​ಗೂ ಏನು ಸಂಬಂಧ. ಅವರನ್ನು ಚಿತ್ರೋದ್ಯಮಿ ಎಂದು ಕರೆಯಲೇಬೇಡಿ. ಡ್ರಗ್ಸ್ ಬಗ್ಗೆ ಆರೊಪ ಹೊರಿಸುತ್ತಿರುವುದೇಕೆ ಎಂದು ಸಂಬರಗಿ ವಿರುದ್ಧ ಕಿಡಿಕಾರಿದ್ದ ಸಾರಾ ಗೋವಿಂದು ಹೇಳಿಕೆಗೆ ಇದೀಗ ಪ್ರಶಾಂತ್​ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

‘ಡ್ರಗ್ಸ್ ಬಗ್ಗೆ ಸತ್ಯ ಹೇಳಲು, ಚಿತ್ರೋದ್ಯಮಿಯೇ ಆಗಬೇಕಾ ಎಂದು ಸಾರಾ ಗೋವಿಂದು ಅವರಿಗೆ ಪ್ರಶ್ನೆ ಮಾಡಿದ್ದಾರೆ. ‘ ನಾನು ಸ್ಯಾಂಡಲ್​ವುಡ್​ ವಿರುದ್ಧ ಆರೋಪ ಮಾಡುತ್ತಿಲ್ಲ. ಸಿನಿಮಾ ಛೇಂಬರ್​ ವಿರುದ್ಧವೂ ನಾನು ಮಾತನಾಡಿಲ್ಲ. ಇಂಡಸ್ಟ್ರಿಯಲ್ಲಿರುವ ಮತ್ತು ಸಮಾಜದಲ್ಲಿರುವ ಡ್ರಗ್ಸ್ ಬಗ್ಗೆ ಮಾತನಾಡಿದ್ದೇನೆ. ಡ್ರಗ್​ ಮಾಫಿಯಾದಲ್ಲಿ ಎಲ್ಲರೂ ಇದ್ದಾರೆ’ ಎಂದಿದ್ದಾರೆ.

‘ಈಗಾಗಲೇ ಬಂಧನದಲ್ಲಿರುವ ಅನಿಕಾ ಬರೋಬ್ಬರಿ 2 ಸಾವಿರ ಕಾಂಟ್ಯಾಕ್ಟ್ ನಂಬರ್​ಗಳನ್ನು ನೀಡಿದ್ದಾಳೆ. ಇನ್ನೇನು ಎಲ್ಲರ ಬಣ್ಣ ಬಯಲಾಗಲಿದೆ. ಇಡೀ ಸರ್ಕಾರವೇ ಡ್ರಗ್ಸ್ ವಿರುದ್ಧ ಯುದ್ಧ ಸಾರಿದೆ. ಆ ಯುದ್ಧದಲ್ಲಿ ನಾನು ಮತ್ತು ಇಂದ್ರಜಿತ್​ ಸೈನಿಕರಾಗಿದ್ದೇವೆ. ಮಾಹಿತಿ ಕೊಡುವುದಷ್ಟೇ ನಮ್ಮ ಕೆಲಸ. ನಮ್ಮ ಸೋಷಿಯಲ್​ ಲೈಫ್​ನಲ್ಲಿ, ನಮ್ಮ ಸಂಬಂಧಿಕರಲ್ಲಿ, ಆಪ್ತರಲ್ಲಿ ಯಾರೇ ಇದರಲ್ಲಿ ಪಾಲುದಾರರಾಗಿದ್ದರೆ ಅದನ್ನು ಸರ್ಕಾರ ಮುಂದಿಡಲು ನಾವು ಸಿದ್ಧ‘ ಎಂದೂ ಪ್ರತಿಕ್ರಿಯಿಸಿದ್ದಾರೆ.

ಬರೀ ಸಿನಿಮಾದವರಷ್ಟೇ ಇದರಲ್ಲಿಲ್ಲ. ರಾಜಕಾರಣಿಗಳ ಮಕ್ಕಳು, ದೊಡ್ಡ ದೊಡ್ಡ ಬಿಲ್ಡರ್​ಗಳ ಮಕ್ಕಳೂ ಪಾಲುದಾರರಾಗಿದ್ದಾರೆ. ನಾನು ಮತ್ತು ಇಂದ್ರಜಿತ್​ ಸಾಮಾಜಿಕ ಹಿತದೃಷ್ಟಿಯಿಮದ ಧ್ವನಿ ಎತ್ತಿದ್ದೇವೆ. ಪೊಲೀಸ್​ ಇಲಾಖೆಯ ಜತೆಗಿದ್ದೇವೆ. ನಾನು ಇಂದ್ರಜಿತ್​ ಬೆಂಬಲಕ್ಕಿದ್ದೇನೆ. ಅವರು ನನಗೆ ಬೆಂಬಲ ನೀಡಿದ್ದಾರೆ. ಮುಂದೆನಾಗುತ್ತೋ ಎಲ್ಲದಕ್ಕೂ ನಾವು ತಯಾರಿದ್ದೇವೆ’ ಎಂದಿದ್ದಾರೆ.

‘ಅಷ್ಟಕ್ಕೂ ಈ ಪ್ರಶಾಂತ್​ ಸಂಬರಗಿ ಯಾರು, ಅವರಿಗೂ ಸ್ಯಾಂಡಲ್​ವುಡ್​ಗೂ ಏನು ಸಂಬಂಧ. ಅವರನ್ನು ಚಿತ್ರೋದ್ಯಮಿ ಎಂದು ಕರೆಯಲೇಬೇಡಿ. ಹಾಗೇ ಕರೆಯುವುದಕ್ಕೆ ಅವರೇನು ಸಿನಿಮಾ ನಿರ್ಮಾಣ ಮಾಡಿದ್ದಾರೆಯೇ, ಅಥವಾ ಹಂಚಿಕೆ, ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆಯೇ. ಅವರೊಬ್ಬ ಸಾಮಾಜಿಕ ಹೋರಾಟಗಾರ ಹಾಗೇಯೇ ಕರೆಯಿರಿ. ಸಿನಿಮಾಕ್ಕೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಸಾರಾ ಗೋವಿಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net