2024ರ ಟಿ20 ವಿಶ್ವಕಪ್​ನಲ್ಲಿ ಜೂನ್​ 9ಕ್ಕೆ ಭಾರತ-ಪಾಕ್​ ಫೈಟ್​?ವರ್ಷಾಂತ್ಯದೊಳಗೆ ವೇಳಾಪಟ್ಟಿ ಪ್ರಕಟ ನಿರೀಕ್ಷೆ

indo vs pak web
Published on

ನವದೆಹಲಿ: ಮುಂದಿನ ವರ್ಷದ ಟಿ20 ವಿಶ್ವಕಪ್​ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್​ 9ರಂದು ನ್ಯೂಯಾರ್ಕ್​ನಲ್ಲಿ ಪರಸ್ಪರ ಮುಖಾಮುಖಿ ಆಗಲಿವೆ ಎಂದು ವರದಿಯಾಗಿದೆ. ಹಾಲಿ ವರ್ಷಾಂತ್ಯದೊಳಗೆ ಅಂದರೆ ಮುಂದಿನ ವಾರಾಂತ್ಯದೊಳಗೆ ವಿಶ್ವಕಪ್​ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಉಪಖಂಡದ ಟಿವಿ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಭಾರತ-ಪಾಕ್​ ಪಂದ್ಯವನ್ನು ಹಗಲಿನಲ್ಲಿ ಆಯೋಜಿಸುವ ಯೋಜನೆ ಇದೆ. ಭಾರತ&ಅಮೆರಿಕ ನಡುವಿನ ಸಮಯದ ವ್ಯತ್ಯಾಸದಿಂದಾಗಿ ಈ ಚಿಂತನೆ ನಡೆದಿದೆ. ಜೂನ್​ 9 ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್​ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ. ಭಾರತ-ಪಾಕ್​ ತಂಡಗಳ ಗುಂಪಿನಲ್ಲಿ ಐರ್ಲೆಂಡ್​ 3ನೇ ತಂಡವಾಗಿರುವ ಸಾಧ್ಯತೆಗಳಿವೆ.

ಅಮೆರಿಕದ 3 ತಾಣಗಳ ಜತೆಗೆ ವೆಸ್ಟ್​ ಇಂಡೀಸ್​ನ 6 ದೇಶಗಳೂ ಟೂರ್ನಿಗೆ ಆತಿಥ್ಯ ವಹಿಸಲಿದೆ. ಆದರೆ ಭಾರತ ತಂಡದ ಬಹುತೇಕ ಎಲ್ಲ ಪಂದ್ಯಗಳು ಅಮೆರಿಕದಲ್ಲೇ ನಡೆಯುವ ಸಾಧ್ಯತೆಗಳಿವೆ. 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಟಿ20 ಕ್ರಿಕೆಟ್​ ಸೇರ್ಪಡೆಯಾಗಿರುವುದರಿಂದ ಅಮೆರಿಕದಲ್ಲಿ ಈಗಿನಿಂದಲೇ ಇದನ್ನು ಜನಪ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ. ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯೊಂದು ಆಯೋಜನೆಗೊಂಡಿದೆ.

ಟಿ20 ವಿಶ್ವಕಪ್​ನಲ್ಲಿ ಈ ಬಾರಿ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಸಲಾಗಿದೆ. ತಂಡಗಳು ತಲಾ 5ರಂತೆ 4 ಗುಂಪುಗಳಲ್ಲಿ ವಿಭಜನೆಯಾಗಲಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್​-8 ಹಂತಕ್ಕೇರಲಿವೆ. ಇಲ್ಲಿ ಮತ್ತೆ ರೌಂಡ್​ ರಾಬಿನ್​ ಮಾದರಿ ಪಂದ್ಯ ನಡೆದ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್​ಗೇರಲಿವೆ. ಟೂರ್ನಿ ಜೂನ್​ 4ರಿಂದ 30ರವರೆಗೆ ನಡೆಯಲಿದೆ.

ಒಂದೇ ಗುಂಪಿನಲ್ಲಿ ಆಸೀಸ್​-ಇಂಗ್ಲೆಂಡ್​

ಆಶಸ್​ ಎದುರಾಳಿಗಳಾದ ಆಸ್ಟ್ರೆಲಿಯಾ-ಇಂಗ್ಲೆಂಡ್​ ತಂಡಗಳೂ ಟಿ20 ವಿಶ್ವಕಪ್​ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ ಎನ್ನಲಾಗಿದೆ. ಇಂಗ್ಲೆಂಡ್​ ಹಾಲಿ ಟಿ20 ವಿಶ್ವ ಚಾಂಪಿಯನ್​ ಆಗಿದ್ದರೆ, ಆಸೀಸ್​ ಹಾಲಿ ಟೆಸ್ಟ್​-ಏಕದಿನ ವಿಶ್ವ ಚಾಂಪಿಯನ್​ ತಂಡವಾಗಿದೆ. ಹೀಗಾಗಿ ಈ ಮುಖಾಮುಖಿಯೂ ತೀವ್ರ ಕುತೂಹಲ ಕೆರಳಿಸಲಿದೆ. ಈ ಪಂದ್ಯ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆಯುವ ನಿರೀೆ ಇದೆ. ನ್ಯೂಜಿಲೆಂಡ್​-ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​-ಶ್ರೀಲಂಕಾ ಮತ್ತೆರಡು ಗುಂಪಿನ ಅಗ್ರ ತಂಡಗಳಾಗಿರುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net