

ಲಖನೌ: ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ಹಮ್ಮಿಕೊಳ್ಳಲಾಗಿದ್ದು, ಇನ್ನೊಂದೆಡೆ ಸುಪ್ರೀಂಕೋರ್ಟ್ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಕೂಡ ಮೊದಲ ಹೆಜ್ಜೆ ಇಡಲಾಗಿದೆ.
ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದದ ಬಗ್ಗೆ ಕಳೆದ ನವೆಂಬರ್ನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ವಿವಾದಿತ ಸ್ಥಳದಲ್ಲಿ ರಾಮ ದೇವಾಲಯ ಇದ್ದುದಕ್ಕೆ ಸಾಕ್ಷಿಗಳಿವೆ. ಹಾಗಾಗಿ ಅಲ್ಲಿ ರಾಮನ ದೇಗುಲ ಕಟ್ಟಬೇಕು. ಆದರೆ ಮುಸ್ಲಿಮರಿಗೆ ಮಸೀದಿ ಕಟ್ಟಲು ಅಯೋಧ್ಯೆಯಲ್ಲಿಯೇ ಸರ್ಕಾರ ಭೂಮಿ ನೀಡಬೇಕು ಎಂದು ಹೇಳಿತ್ತು.
ಅದರಂತೆ ಉತ್ತರ ಪ್ರದೇಶ ಸರ್ಕಾರ 5 ಎಕರೆ ಭೂಮಿಯನ್ನು ನೀಡಿದೆ. ಇದೀಗ ಮಸೀದಿ ನಿರ್ಮಾಣಕ್ಕೆ ಟ್ರಸ್ಟ್ ರಚನೆಯಾಗಿದ್ದು, ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಎಂದು ಅದಕ್ಕೆ ಹೆಸರಿಡಲಾಗಿದೆ. ಟ್ರಸ್ಟ್ನಲ್ಲಿ 15 ಸದಸ್ಯರು ಇದ್ದಾರೆ ಎಂದು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ತಿಳಿಸಿದೆ.
ಮಸೀದಿ ನಿರ್ಮಾಣಕ್ಕೆಂದು ಸರ್ಕಾರ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಕೊಟ್ಟಿರುವ 5 ಎಕರೆ ಭೂಮಿಯನ್ನು ನಾವು ಸ್ವೀಕರಿಸಿದ್ದೇವೆ. ನಮ್ಮ ವಕ್ಫ್ ಮಂಡಳಿಯಿಂದಲೇ ಟ್ರಸ್ಟ್ ರಚನೆ ಮಾಡಲಾಗಿದೆ. ಇದನ್ನೂ ಓದಿ: ಗೆಟ್ ಟುಗೆದರ್ ಪಾರ್ಟಿ ಬೆನ್ನಲ್ಲೇ ಕಾದಿತ್ತು ಸಾವು: ಕೊಲ್ಲುವಂಥದ್ದೇನಾಗಿತ್ತು?
ಇದೀಗ ನಿರ್ಮಾಣ ಆಗಲಿರುವ ಮಸೀದಿ ಕೂಡ ಈ ಹಿಂದಿನ ಬಾಬ್ರಿ ಮಸೀದಿ ಇದ್ದಷ್ಟು ದೊಡ್ಡದಾಗಿಯೇ ಇರಲಿದೆ. ಹಾಗೇ ಮಸೀದಿಯಲ್ಲಿ ಸಮುದಾಯಕ್ಕೆ ಹಲವು ಅನುಕೂಲಗಳನ್ನು ಕಲ್ಪಿಸಲಾಗುವುದು. ಅಡುಗೆ ವ್ಯವಸ್ಥೆ, ಆರೋಗ್ಯ, ವೈದ್ಯಕೀಯ ವ್ಯವಸ್ಥೆ, ಸಂಶೋಧನೆ, ಮ್ಯೂಸಿಯಂ, ಗ್ರಂಥಾಲಯ, ಪ್ರಕಟಣಾ ವಿಭಾಗಳನ್ನೂ ಒಳಗೊಳ್ಳಲಿದೆ ಎಂದು ಹೇಳಲಾಗಿದೆ.
ಟ್ರಸ್ಟ್ ರಚನೆ ಮಾಡಲಾಗಿದ್ದರೂ ಸದ್ಯಕ್ಕೆ ಮಸೀದಿ ನಿರ್ಮಾಣ ಕಾರ್ಯ ಪ್ರಾರಂಭವಾಗುವುದಿಲ್ಲ ಎಂದು ಹೇಳಲಾಗಿದೆ. ಕರೊನಾ ವೈರಸ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಸೀದಿ ಕಟ್ಟುವುದು ಸರಿಯಲ್ಲ. ಒಂದು ಸಲ ಈ ಸಂಕಷ್ಟ ಮುಗಿದು ಹೋಗಲಿ. ಸದ್ಯದ ಆದ್ಯತೆ ಕರೊನಾ ವಿರುದ್ಧದ ಹೋರಾಟ ಎಂದು ವಕ್ಫ್ ಬೋರ್ಡ್ ಹೇಳಿದೆ. (ಏಜೆನ್ಸೀಸ್)