ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಇಂಡಿಗೋ, 6 ಜನ ಪ್ರಯಾಣಿಕರೊಂದಿಗೆ ವಿಮಾನ ಹಾರಿಸಲು ನಿರಾಕರಣೆ

flight (1)
Published on

ಬೆಂಗಳೂರು: ಇಂಡಿಗೋ ವಿಮಾನಗಳಲ್ಲಿ ವಿವಾದಗಳ ಘಟನೆಗಳು ಹೆಚ್ಚಾಗುತ್ತಿವೆ. 2 ದಿನಗಳ ಹಿಂದೆ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕರೊಬ್ಬರು ಇಂಡಿಗೋ ವಿಮಾನದಲ್ಲಿ ಗಲಾಟೆ ಮಾಡಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರೆ, ಸೋಮವಾರ ರಾತ್ರಿ ಇಂಡಿಗೋ ಕೇವಲ 6 ಮಂದಿ ಪ್ರಯಾಣಿಕರಿದ್ದ ವಿಮಾನ ಹಾರಾಟ ನಡೆಸಲು ನಿರಾಕರಿಸಿ, ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದೆ. ಇದರಿಂದ ಪ್ರಯಾಣಿಕರು ರಾತ್ರಿಯಿಡೀ ಪರದಾಡುವ ಸ್ಥಿತಿ ಬಂದೊದಗಿದೆ.

ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ವಿಮಾನದಿಂದ ಕೆಳಗಿಳಿದ ಪ್ರಯಾಣಿಕರು, ಇಂಡಿಗೋ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ಇದರಿಂದಾಗಿ ತಮಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಕಂಪನಿ ವಿರುದ್ಧ ಕ್ರಮ ಕೈಗೊಂಡು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವರದಿಗಳ ಪ್ರಕಾರ, ಇಂಡಿಗೋ ಕೇವಲ 6 ಪ್ರಯಾಣಿಕರೊಂದಿಗೆ ವಿಮಾನ ಹಾರಾಟ ಆರಂಭಿಸುವುದಿಲ್ಲ ಎಂದು ಹೇಳಿದೆ. ಹೀಗಾಗಿ ಗ್ರೌಂಡ್ ಸಿಬ್ಬಂದಿ ಯಾವುದೋ ನೆಪ ಹೇಳಿ ಅವರನ್ನು ವಿಮಾನದಿಂದ ಇಳಿಸಿದ್ದಾರೆ. ಇದರಿಂದ ವಿಮಾನ ಪ್ರಯಾಣಿಕರು ರಾತ್ರಿ ನಗರದಲ್ಲಿ ತಂಗಬೇಕಾಯಿತು. ಅಂದಹಾಗೆ ಈ ಘಟನೆ ನಡೆದದ್ದು ಭಾನುವಾರ ರಾತ್ರಿ. ಸೋಮವಾರ ಬೆಳಗ್ಗೆ ಅವರು ಮತ್ತೊಂದು ವಿಮಾನದಲ್ಲಿ ಚೆನ್ನೈಗೆ ತೆರಳಿದ್ದಾರೆ. ಆರು ಮಂದಿ ಪ್ರಯಾಣಿಕರಲ್ಲಿ ಇಬ್ಬರು ವೃದ್ಧರೂ ಸೇರಿದ್ದಾರೆ.

ವಿಮಾನ ನಿಲ್ದಾಣದ ಹೋಟೆಲ್ ನಲ್ಲಿ ತಂಗಲು ಇಂಡಿಗೋ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಆರೋಪಿಸಿರುವ ಪ್ರಯಾಣಿಕರು, ಇದು ತಮಗೆ ಹೆಚ್ಚು ನೋವು ತಂದಿದೆ ಎಂದು ತಿಳಿಸಿದ್ದಾರೆ. ಈ ಇಂಡಿಗೋ ವಿಮಾನ 6E478 ಅಮೃತಸರದಿಂದ ಬೆಂಗಳೂರಿನ ಮೂಲಕ ಚೆನ್ನೈಗೆ ತೆರಳಬೇಕಿತ್ತು. ಆದರೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನವನ್ನು ನಿಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net