ಭಾರತದ ಶುಭಾಂಶು ಶುಕ್ಲಾ ಸ್ಪೇಸ್ ಪಯಣ​ ಮತ್ತೆ ಮುಂದೂಡಿಕೆ!: Axiom-4 ಮಿಷನ್​ಗೆ ಆಗಿದ್ದೇನು..?

dk - 2025-06-11T074439.041
Published on

Axiom-4: ಭಾರತೀಯ ಗಗನಯಾತ್ರಿ ಮತ್ತು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಸದಸ್ಯರ ಸಿಬ್ಬಂದಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಮಿಷನ್‌ಗೆ ಕರೆದೊಯ್ಯುವ ಆಕ್ಸಿಯಮ್(Axiom) -4 ಇದೀಗ ತಾಂತ್ರಿಕದೋಷ ಕಾರಣದಿಂದಾಗಿ 2ನೇ ಬಾರಿಗೆ ಮುಂದೂಡಲಾಗಿದೆ.

ಈ ಕಾರ್ಯಾಚರಣೆಯ ಅಡಿಯಲ್ಲಿ ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಗಿಸಬೇಕಾಗಿದ್ದ ಫಾಲ್ಕನ್ 9 ರಾಕೆಟ್ ಅನ್ನು ಹೊಂದಿದ್ದ ಸ್ಪೇಸ್‌ಎಕ್ಸ್, ರಾಕೆಟ್‌ನಲ್ಲಿ "ಪೋಸ್ಟ್ ಸ್ಟ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆಯ ಸಮಯದಲ್ಲಿ ಗುರುತಿಸಲಾದ LOx ಸೋರಿಕೆಯನ್ನು ಸರಿಪಡಿಸಲು" ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದು ಸ್ಪೇಸ್​​ ಎಕ್ಸ್​​ ತನ್ನ X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದೆ. ಅಲ್ಲದೆ, ಉಡಾವಣೆಗೆ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದೆ.

ಮುಂದೂಡಲು ಕಾರಣ..? ಉಡಾವಣಾ ಪ್ಯಾಡ್‌ನಲ್ಲಿ ಏಳು ಸೆಕೆಂಡುಗಳ ಕಾಲ ನಡೆಸಿದ ಬಿಸಿ ಪರೀಕ್ಷೆಯ ಸಮಯದಲ್ಲಿ ಪ್ರೊಪಲ್ಷನ್ ಬೇಯಲ್ಲಿ LOX (ದ್ರವ ಆಮ್ಲಜನಕ) ಸೋರಿಕೆ ಪತ್ತೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಹೀಗಾಗಿ, ಮೊದಲು ಸೋರಿಕೆಯನ್ನು ಸರಿಪಡಿಸಲು ಮತ್ತು ಉಡಾವಣೆಗೆ ತೆರವುಗೊಳಿಸುವ ಮೊದಲು ಅಗತ್ಯ ಮೌಲ್ಯೀಕರಣ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಇದೇ ಮೊದಲ ಬಾರಿ ಅಲ್ಲ..!

ಈ ಯೋಜನೆ ಮುಂದೂಡಲ್ಪಟ್ಟಿರುವುದು ಇದೇ ಮೊದಲಲ್ಲ. ಜೂ.10 ರಂದು ಉಡಾವಣೆ ನಿಗದಿಯಾಗಿತ್ತು. ಆದರೆ, "ಪ್ರತಿಕೂಲ ಹವಾಮಾನ" ದಿಂದಾಗಿ ಜೂ.11 ಕ್ಕೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೋಮವಾರ ಪ್ರಕಟಿಸಿದೆ. ಜೂನ್ 11 ರಂದು ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಉಡಾವಣೆ ಮಾಡಲು ಈ ಕಾರ್ಯಾಚರಣೆಯನ್ನು ಮರು ನಿಗದಿಪಡಿಸಲಾಗಿತ್ತು ಆದರೆ ಈಗ ಮತ್ತೆ ವಿಳಂಬವಾಗಿದೆ.

ಈ ಸ್ಪೇನ್ ಮಿಷನ್ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. 1984ರಲ್ಲಿ ರಷ್ಯಾದ ಸೋಯುಜ್ ರಾಕೆಟ್ ಬಳಸಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ರಾಕೇಶ್ ಶರ್ಮಾ ಎಂಬುದು ಗಮನಾರ್ಹ(ಏಜೆನ್ಸಿಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net