ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧನೆ ಅತ್ಯನ್ನತ : ವಿಜ್ಞಾನಿ ಡಾ.ವಿ.ರಾಧಾಕೃಷ್ಣ ಅಭಿಮತ

5 A
Published on

ಮೈಸೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ ಸಾಧನೆಯ ಉತ್ತುಂಗಕ್ಕೇರಿಸುವ ಗುರಿ ಹೊಂದಿದೆ ಎಂದು ಇಸ್ರೋ ಬಾಹ್ಯಾಕಾಶ ಖಗೋಳ ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ವಿ.ರಾಧಾಕೃಷ್ಣ ತಿಳಿಸಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಶುಕ್ರವಾರ ಆಯೋಜಿಸಿದ್ದ ‘ಬಾಹ್ಯಾಕಾಶ ವಿಜ್ಞಾನ ಕಾರ್ಯಾಚರಣೆಗಳು: ಸವಾಲುಗಳು ಮತ್ತು ಅವಕಾಶಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸಂಶೋಧನಾ ಕಾರ್ಯಗಳು ನಮ್ಮ ದೇಶದಲ್ಲಿ ನಡೆದಿವೆ. ಇದಕ್ಕೆ ಚಂದ್ರಯಾನ-3 ಭಾರತ ವಿಜ್ಞಾನ ಕ್ಷೇತ್ರದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಾಗಲೇ ಭಾರತ ಚಂದ್ರಯಾನ 1, 2, 3 ಯಶಸ್ವಿಗೊಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ 2040 ವೇಳೆಗೆ ಚಂದ್ರಯಾನ 4 ಮತ್ತು 5 ಹಾಗೂ ಎಂಒಎಂ ಯೋಜನೆ ಹಾಕಿಕೊಳ್ಳಲಾಗಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ಭಾರತದ ಸಾಧನೆ ಉತ್ತುಂಗಕ್ಕೇರಿಸುವ ಗುರಿ ಹೊಂದಿದ್ದಾರೆ ಎಂದು ಹೇಳಿದರು.

ನಾಸಾ, ಇಎಸ್‌ಎ, ಸಿಎನ್‌ಎಸ್‌ಎ ಸೇರಿದಂತೆ ವಿವಿಧ ಸಂಸ್ಥೆಗಳೂ ಎಕ್ಸ್‌ರೇ, ಗಾಮಾ ರೇ, ಮೈ ಪ್ಲಾನೆಟರಿ, ಡೀಪ್‌ಸ್ಪೇಸ್ ಯೋಜನೆಗಳನ್ನು ಹಮ್ಮಿಕೊಂಡಿವೆ. ಜೆವಿಎಸ್‌ಟಿ ಯೋಜನೆಯ ಮೊತ್ತ 140 ಲಕ್ಷ ಕೋಟಿ ರೂ. ಆಗಿದ್ದು, ಅದರ ನಿರ್ಮಾಣಕ್ಕೆ 20 ವರ್ಷ ಬೇಕಾಗಿದೆ. ಬಾಹ್ಯಾಕಾಶ ಅಧ್ಯಯನಕ್ಕೆ ಇಷ್ಟೊಂದು ಹಣ ವೆಚ್ಚ ಮಾಡಬೇಕೇ ಎಂದೆನಿಸಬಹುದು. ಆದರೆ ಮಾನವನ ಕುತೂಹಲ ಹಾಗೂ ಆತನ ಚಿಂತನೆಗಳೇ ಆಧುನಿಕ ಯುಗಕ್ಕೆ ಕರೆತಂದಿದೆ ಎಂದು ವಿಶ್ಲೇಷಿಸಿದರು.

ಕಾಶ್ಮೀರದ ಗುಹೆಯೊಂದರಲ್ಲಿ 5 ಸಾವಿರ ವರ್ಷದ ಹಿಂದೆ ಆದಿ ಮಾನವ ಬಾಹ್ಯಾಕಾಶದಲ್ಲಿ ನಕ್ಷತ್ರ ಸಿಡಿಯುವ ಬೆಳವಣಿಗೆಯನ್ನು ಚಿತ್ರಿಸಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ ಕರೆತಂದಿರುವುದು ಕುತೂಹಲವೇ ಆಗಿದೆ ಎಂದು ಬಣ್ಣಿಸಿದರು.

ವಿಜ್ಞಾನದ ವಿಷಯಗಳಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಆದ್ದರಿಂದ ವಿಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆಯನ್ನು ನಡೆಸುವವರು ಎದುರಾಗುವ ಸವಾಲುಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ದೇಶದ ಪ್ರಗತಿಗೆ ಅನುಕೂಲವಾಗುವ ಸಂಶೋಧನೆಗಳನ್ನು ನೀಡಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಶಾಲಾ-ಕಾಲೇಜು ದಿನಗಳಲ್ಲಿಯೇ ವಿಜ್ಞಾನಕ್ಕೆ ಸಂಬಂಧಿಸಿದ ಮೂಲಭೂತ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ವಿಜ್ಞಾನದ ವಿಷಯಗಳನ್ನು ಹೆಚ್ಚಿನ ಆಸಕ್ತಿ ವಹಿಸಿ ಕಲಿಯಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಸರ್ಕಾರಗಳು ವಿಜ್ಞಾನದ ಸಂಶೋಧನೆಗೆ ಹೆಚ್ಚು ಆದ್ಯತೆ ಕೊಡಬೇಕು. ಆಗ ಹೊಸ, ಹೊಸ ಸಂಶೋಧನೆಗಳು ಹೊರಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿ ಕುಲಸಚಿವೆ ಎಂ.ಕೆ.ಸವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net