

ಮುಂಬೈ: ರಾಜಕೀಯ ಪರಿಸ್ಥಿತಿ ಮತ್ತು ಜಾಗತಿಕ ಬಡ್ಡಿದರಗಳು ಇಳಿಕೆಯಾಗುತ್ತಿರುವ ಹಿನ್ನೆಲೆ, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸದ್ಯ ಪ್ರತಿ ಡಾಲರ್‌ಗೆ 78.23 ರೂಪಾಯಿ ಪಾವತಿಸಬೇಕಿದೆ. ಇದು ಇಲ್ಲಿಯವರೆಗಿನ ಕೆಟ್ಟ ದಾಖಲೆ.
2022 ರಲ್ಲಿ ಇಲ್ಲಿಯವರೆಗೆ ಯುಎಸ್ ಡಾಲರ್ ವಿರುದ್ಧ ಭಾರತೀಯ ಕರೆನ್ಸಿ ಶೇ. 5.2ರಷ್ಟು ಕುಸಿತ ಕಂಡಿದೆ. ವಿಶ್ವದಾದ್ಯಂತ ಆರ್ಥಿಕ ಸನ್ನಿವೇಶವು ವಿವಿಧ ಸವಾಲುಗಳನ್ನು ಎದುರಿಸುತ್ತಿದೆ.
ಕುಸಿಯುತ್ತಿರುವ ರೂಪಾಯಿ ಮೌಲ್ಯವು, ಭಾರತದಲ್ಲಿ ವಸತಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಎನ್‌ಆರ್‌ಐಗಳಿಗೆ ಒಂದು ಉತ್ತಮ ಅವಕಾಶವಾಗಿದೆ ಎಂದು ಕೆ.ರಹೇಜಾ ಕಾರ್ಪ್ ಹೋಮ್ಸ್ ಮುಖ್ಯ ಕಾರ್ಯನಿರ್ವಾಹಕ ರಮೇಶ್ ರಂಗನಾಥನ್ ಹೇಳಿದ್ದಾರೆ.
ಷೇರು ಮಾರುಕಟ್ಟೆಗಳಲ್ಲಿ ಈಕ್ವಿಟಿ ಮಾರಾಟದ ನಡುವೆ, ವಿದೇಶಿ ಬಂಡವಾಳ ದೊಡ್ಡ ಪ್ರಮಾಣದಲ್ಲಿ ವಾಪಸ್ಸಾಗುತ್ತಿದೆ. ರೂಪಾಯಿ ಮೌಲ್ಯ ಕುಸಿಯಲು ಇದು ಪ್ರಮುಖ ಕಾರಣ. ಮುಂಬೈ ಷೇರು ಮಾರುಕಟ್ಟೆಯೂ ಕೂಡ ಹಿನ್ನಡೆ ಅನುಭವಿಸುತ್ತಿದೆ. ಸೆನ್ಸೆಕ್ಸ್ 1,506 ಅಂಕ ಕಳೆದುಕೊಂಡರೆ, ನಿಫ್ಟಿ 442 ಅಂಕ ಇಳಿದಿದೆ. ಇದು ಶೇ.2.77 ರಷ್ಟು ಕುಸಿತವಾಗಿದೆ.