

ನವದೆಹಲಿ: ಪೂರ್ವ ಲಡಾಖ್ನ ಗಲ್ವಾನ್ ಪ್ರದೇಶದಲ್ಲಿ ಜೂನ್ 15ರಂದು ಭಾರತ - ಚೀನಾ ಯೋಧರ ನಡುವೆ ನಡೆದ ಘರ್ಷಣೆ ಬಳಿಕ ಭಾರತದ ನೌಕಾಪಡೆ ದಕ್ಷಿಣ ಚೀನಾ ಸಮುದ್ರಕ್ಕೆ ಯುದ್ಧ ಹಡಗೊಂದನ್ನು ಕಳಿಸಿತ್ತು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಸಂಘರ್ಷ ಬಳಿಕ ಎದುರಾಗಬಹುದಾದ ಯಾವುದೇ ಸನ್ನಿವೇಶ ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಯುದ್ಧ ಹಡಗನ್ನು ರವಾನೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಭಾರತದ ಯುದ್ಧ ಹಡಗು ಈ ಪ್ರದೇಶದಲ್ಲಿ ನಿಯೋಜನೆಗೊಂಡಿರುವುದು ಚೀನಾ ಸೇನೆಯ ಆತಂಕಕ್ಕೆ ಕಾರಣವಾಗಿತ್ತು. ಭಾರತ ಹಾಗೂ ಅಮೆರಿಕ ನಡುವೆ ರಕ್ಷಣಾ ಸಹಕಾರ ಒಪ್ಪಂದ ಇರುವ ಕಾರಣ, ಅಮೆರಿಕದ ಹಡಗುಗಳು ಭಾರತದ ನೌಕೆ ಜತೆ ಸಂಪರ್ಕದಲ್ಲಿದ್ದವು. ಈ ವಿಚಾರವನ್ನು ಚೀನಾ ಸೇನೆ ಅಧಿಕಾರಿಗಳ ಹಂತದ ಮಾತುಕತೆಯಲ್ಲಿ ಪ್ರಸ್ತಾಪಿಸಿತ್ತು. ಹಡಗನ್ನು ಹಿಂಪಡೆಯುವಂತೆ ಭಾರತವನ್ನು ಆಗ್ರಹಿಸಿತ್ತು ಎನ್ನಲಾಗಿದೆ.
ದಕ್ಷಿಣ ಚೀನಾ ಸಮುದ್ರ ಮೇಲೆ ಚೀನಾ ಹಲವು ವರ್ಷಗಳಿಂದ ತನ್ನ ಅಧಿಕಾರ ಸ್ಥಾಪಿಸಲು ಯತ್ನಿಸುತ್ತಿದೆ. ಚೀನಾಕ್ಕೆ ತೈಲ, ಸರಕುಗಳನ್ನು ಸಾಗಿಸಲು ಇದು ಮಹತ್ವದ ಮಾರ್ಗವಾಗಿದೆ. ವ್ಯಾಪಾರ ಹಾಗೂ ರಕ್ಷಣೆ ದೃಷ್ಟಿಯಿಂದಲೂ ಇದು ಆಯಕಟ್ಟಿನ ಜಲಮಾರ್ಗ. ಇಲ್ಲಿ ಯುದ್ಧ ಹಡಗು ನಿಯೋಜನೆ ಮಾಡುವ ಮೂಲಕ ಭಾರತ ಪ್ರಬಲ ತಿರುಗೇಟು ನೀಡಿತು. ಜತೆಗೆ ಅಮೆರಿಕ ಸಹಕಾರ ಇದ್ದ ಕಾರಣ ಚೀನಾ ಸೇನೆ ಅನಿವಾರ್ಯವಾಗಿ ಮೃದುವಾಗಬೇಕಾಯಿತು ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಭಾರತ ಮಲಕ್ಕಾ ಜಲಸಂಧಿಯಲ್ಲಿ ಮತ್ತೊಂದು ಹಡಗನ್ನು ನಿಯೋಜನೆ ಮಾಡಿತ್ತು. ಹಿಂದು ಮಹಾಸಾಗರ ಪ್ರದೇಶಕ್ಕೆ ಚೀನಾದಿಂದ ಹಡಗುಗಳು ಇದೇ ಮಾರ್ಗವಾಗಿ ಬರಬೇಕು. ಚೀನಾದ ಸಬ್ವುರಿನ್ಗಳು ಗೂಢಚಾರಿಕೆ ನಡೆಸಲು ಇದೇ ಮಾರ್ಗವಾಗಿ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದ ಬಳಿ ಬಂದ ಉದಾಹರಣೆಗಳಿವೆ. ಗಲ್ವಾನ್ ಘಟನೆ ಬಳಿಕ ಚೀನಾ ಮತ್ತೆ ಇಂಥ ಯತ್ನಕ್ಕೆ ಕೈಹಾಕಬಹುದು ಎಂಬ ಕಾರಣಕ್ಕೆ ಭಾರತ ಇಲ್ಲಿ ಯುದ್ಧ ಹಡಗು ನಿಯೋಜನೆ ಮಾಡಿತ್ತು. ಇದರಿಂದ ಕೂಡ ಚೀನಾಕ್ಕೆ ಹಿನ್ನಡೆ ಉಂಟಾಯಿತು ಎಂದು ವರದಿಯೊಂದು ಹೇಳಿದೆ.