

ನವದೆಹಲಿ: ಕೇರಳದ ತ್ರಿಶೂರ್ನ ಸುನೀಲ್ಕುಮಾರ್ ಎಂಬಾತ ಯುಎಇನಲ್ಲಿ ದಾಖಲೆಗಳನ್ನು ಕಳೆದುಕೊಂಡು ಸಿಕ್ಕಿ ಹಾಕಿಕೊಂಡಿದ್ದು, ಕೊನೆಗೂ 18 ವರ್ಷಗಳ ಪರದಾಟದ ಬಳಿಕ ಮನೆಗೆ ಮರಳಿದ್ದಾರೆ. 2005ರಲ್ಲಿ ಯುಎಇಗೆ ತೆರಳಿದ್ದ ಇವರು, ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಂಡು, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು. ನಂತರ 2007ರಲ್ಲಿ ಪಾಸ್ಪೋರ್ಟ್ ಅವಧಿ ಮುಗಿದರೂ ದುಬೈನಲ್ಲಿನ ಇಂಡಿಯನ್ ಕಾನ್ಸುಲೇಟ್ನಿಂದ ತುರ್ತು ಪ್ರಮಾಣಪತ್ರ ಪಡೆದಿದ್ದರು.
ಆದರೆ ಆರೋಗ್ಯ ಹದಗೆಟ್ಟಿದ್ದರಿಂದ ಕ್ಷಮಾದಾನ ಸಿಕ್ಕರೂ ಮನೆಗೆ ಮರಳಲು ಆಗಿರಲಿಲ್ಲ. ರಾಯಭಾರ ಕಚೇರಿ ಮೂಲಕ ಈ ವಿಷಯ ಸಾಮಾಜಿಕ ಕಾರ್ಯಕರ್ತರಿಗೆ ಗೊತ್ತಾಗಿ ಮುಂದಿನ ವ್ಯವಸ್ಥೆ ಮಾಡಲು ಮುಂದಾದರೂ ಪಾಸ್ಪೋರ್ಟ್ ವಿವರ ಓದಲು ಸಾಧ್ಯವಾಗದ್ದರಿಂದ ಅದನ್ನು ಕೊಚ್ಚಿ ಪಾಸ್ಪೋರ್ಟ್ ಕಚೇರಿಗೆ ಕಳುಹಿಸಿ 2023ರ ಅಕ್ಟೋಬರ್ನಲ್ಲಿ ಇನ್ನೊಂದು ತುರ್ತು ಪ್ರಮಾಣಪತ್ರ ಪಡೆಯಲಾಯಿತು.
ಈ ಮಧ್ಯೆ ಸುನಿಲ್ ಆರೋಗ್ಯ ಇನ್ನಷ್ಟು ಹದಗೆಟ್ಟು ಶಾರ್ಜಾದಲ್ಲಿ ಉಳಿಯುವಂತಾಗಿತ್ತು. ಅಗತ್ಯವಿರುವ ಇನ್ನಷ್ಟು ಕ್ರಮಗಳನ್ನು ಡಿಸೆಂಬರ್ನಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಕರ್ತರು ಜ. 4ರಂದು ಕೇರಳಕ್ಕೆ ಕರೆಸಿಕೊಂಡು, ಬಳಿಕ ತ್ರಿಶೂರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.