ಲಕ್ಷ್ಮೇಶ್ವರ: ಭಾರತೀಯ ಸಂಸ್ಕೃತಿ, ಹಬ್ಬ, ಆಚರಣೆ ಹಾಗೂ ಸಂಪ್ರದಾಯಗಳು ಜಾನಪದ ಸಾಹಿತ್ಯ, ಹಾಡುಗಳಿಗೆ ಮೂಲಾಧಾರವಾಗಿವೆ ಎಂದು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹಣಗಿ ಅಭಿಪ್ರಾಯಪಟ್ಟರು.
ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಸದ ಮಾತು ಮಾಲಿಕೆಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಜಾನಪದ ಜಾಗರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಬದುಕಿನೊಂದಿಗೆ ಮೇಳೈಸಿಕೊಂಡು ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯ ಸಾಹಿತ್ಯವೇ ಜನಪದ ಸಾಹಿತ್ಯವಾಗಿದೆ. ಗ್ರಾಮೀಣ ಜನರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಒಗಟು, ಲಾವಣಿ, ಸೋಭಾನೆ ಹಾಡು, ಕಟ್ಟುವ ಪದ, ಹಂತಿ ಹಾಡು, ಡೊಳ್ಳಿನ ಹಾಡು, ಬೀಸುವ ಪದ, ಮದುವೆ ಹಾಡು ಹೀಗೆ ಇನ್ನೂ ಹಲವಾರು ಪ್ರಕಾರಗಳಲ್ಲಿ ಜಾನಪದ ಸಾಹಿತ್ಯವೇ ತುಂಬಿಕೊಂಡಿದೆ. ಜಾನಪದ ಸಾಹಿತ್ಯವು ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಉಡುಗೆ-ತೊಡುಗೆಗಳ ಸಮ್ಮಿಲನವಾಗಿದೆ ಎಂದರು.
ವಿಜ್ಞಾನ ಸಂಪನ್ಮೂಲ ಶಿಕ್ಷಕ ಈರಣ್ಣ ಗಾಣಿಗೇರ ಮಾತನಾಡಿ, ಶಿವರಾತ್ರಿ ಹಬ್ಬದ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಚಳಿಗಾಲ ಕಳೆದು ಬೇಸಿಗೆ ಬರುವ ಸಂದರ್ಭದಲ್ಲಿ ಮನುಷ್ಯನ ದೇಹ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಲು ಶಿವರಾತ್ರಿ ಸಹಕಾರಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಹಿತಿ, ಪತ್ರಕರ್ತ ಅಶೋಕ ಸೊರಟೂರ, ಶಿವರಾತ್ರಿ ಹಬ್ಬಕ್ಕೆ ಪೌರಾಣಿಕ, ಐತಿಹಾಸಿಕ ಪ್ರಾಮುಖ್ಯತೆ ಇದೆ. ಅದು ನಮ್ಮ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ಶಿವನ ಸಂಸಾರವು ವೈರುಧ್ಯಗಳ ಸಂಕೇತ. ಈ ವೈರುಧ್ಯಗಳ ಮೂಲಕ ಜಗದ ಸಮಸ್ತ ಜನತೆಗೆ ಸಂಸಾರದ ಭಿನ್ನಾಭಿಪ್ರಾಯಗಳೆಲ್ಲವನ್ನೂ ಬದಿಗಿರಿಸಿ ಬದುಕು ಕಟ್ಟಿಕೊಳ್ಳಬೇಕು ಎಂಬ ಸಂದೇಶ ಶಿವರಾತ್ರಿ ನೀಡುತ್ತದೆ ಎಂದರು. ಈಶ್ವರ ಗದಗ ಮಾತನಾಡಿದರು. ಧಾರ್ವಿುಕ ಸೇವಾಧಾರಿಗಳಾದ ತಿಪ್ಪಣ್ಣ ಹಡಪದ, ಕೊಟ್ರೇಶ ಅಳವಂಡಿ, ಕ.ಸಾ.ಪ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಉಪಸ್ಥಿತರಿದ್ದರು.
ಗಾಯಕರಾದ ಹನುಮಂತಸಾ ಚೌದರಿ, ಸುರೇಶ ಉಮಚಗಿ, ಕು. ಪೂಜಾ ಹಬೀಬ, ತಬಲಾ ವಾದಕ ಮಹಾಬಳೇಶ್ವರ ಕಡ್ಡಿಪೂಜಾರ 3 ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಮ್ರತಾ ಸುನೀಲ ಮೆಡ್ಲೇರಿ ಪ್ರಾರ್ಥಿಸಿದಳು. ಶಿವರಾಜ ಗುಜರಿ ಸ್ವಾಗತಿಸಿದರು. ಪುರಸಭಾ ಮಾಜಿ ಉಪಾಧ್ಯಕ್ಷ ಗುರುಪುತ್ರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ನಾಗರಾರಿ ಮಜ್ಜಿಗುಡ್ಡ ನಿರೂಪಿಸಿದರು. ಸುಮಾರು ನೂರಾರು ಆಸಕ್ತ ಮಕ್ಕಳು,ಮಹಿಳೆಯರು, ಯುವಕರು, ಹಿರಿಯರು ಪಾಲ್ಗೊಂಡಿದ್ದರು.