ಈತನ ಹೆಸರು ಸಚಿನ್, ಇಷ್ಟದ ಕ್ರಿಕೆಟಿಗ ವಿರಾಟ್ ಕೊಹ್ಲಿ!: ಭಾರತ ಕಿರಿಯರ ತಂಡದ ಗೆಲುವಿನ ರೂವಾರಿ

New-Project-2-3
Published on

ನವದೆಹಲಿ: ಭಾರತದ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹೆಸರನ್ನು ಹೊಂದಿರುವ ಭಾರತ ಕಿರಿಯರ ತಂಡದ ಬ್ಯಾಟರ್ ಸಚಿನ್ ದಾಸ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದಾರೆ. ಆದರೆ ತಂದೆಯ ಕ್ರಿಕೆಟ್ ಮೇಲಿನ ಪ್ರೀತಿಯಿಂದ ‘ಸಚಿನ್’ ಹೆಸರಿನ ಜತೆಗೆ ಅವರ ನಂ.10 ಜೆರ್ಸಿಯನ್ನು ಧರಿಸಿ ಕಿರಿಯರ ತಂಡ ಪ್ರತಿನಿಧಿಸುತ್ತಿದ್ದು, ಭವಿಷ್ಯದ ಆಟಗಾರ ಎನಿಸಿದ್ದಾರೆ.

‘2005ರಲ್ಲಿ ಸಚಿನ್ ಜನಿಸಿದಾಗ ದಿಗ್ಗಜ ತೆಂಡುಲ್ಕರ್ ಅವರ ಹೆಸರನ್ನು ನಾನು ಹೆಸರಿಸಿದೆ. ಏಕೆಂದರೆ ನಾನು ಸಚಿನ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಆದರೆ ಸಚಿನ್ ದಾಸ್, ವಿರಾಟ್ ಕೊಹ್ಲಿಯನ್ನು ತುಂಬ ಇಷ್ಟಪಡುತ್ತಾನೆ. ಸಚಿನ್ ಇಂದು ಭರವಸೆಯ ಪ್ರತಿಭೆಯಾಗಿ ರೂಪುಗೊಂಡಿದ್ದಾನೆ. ಆದರೆ ಅವನಿಗೆ ಯಾವುದೇ ಸ್ನೇಹಿತರಿಲ್ಲ. ನಾನೊಬ್ಬನೆ ಅವನ ಏಕೈಕ ಸ್ನೇಹಿತ. ಸಚಿನ್‌ಗೆ ಮದುವೆ, ಜನ್ಮದಿನದ ಪಾರ್ಟಿಗಳಲ್ಲಿ ಭಾಗವಹಿಸಲು ಅವಕಾಶ ನೀಡದೆ, ಕ್ರಿಕೆಟ್‌ನತ್ತ ಸಂಪೂರ್ಣ ಗಮನ ಹರಿಸುವಂತೆ ಶಿಸ್ತಿನ ನಿಯಮ ರೂಪಿಸಲಾಗಿತ್ತು. ಸಚಿನ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲಿ ಅಥವಾ ಸಿನಿಮಾ ನೋಡಲಿ, ನಾನು ಅವನ ಜತೆಗಾರ’ ಎಂದು ಸಂಜಯ್ ಮಗನ ಪ್ರದರ್ಶನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಶೀಘ್ರ ಹಿರಿಯರ ತಂಡಕ್ಕೂ ಸಚಿನ್ ದಾಸ್ ಆಯ್ಕೆಯಾಗುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ.

ಐಸಿಸಿ 19 ವಯೋಮಿತಿ ವಿಶ್ವಕಪ್ ಸೆಮಿೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಯಕ ಉದಯ್ ಸಹಾರನ್ ಜತೆ ಗೆಲುವಿನ ಜತೆಯಾಟ ನೀಡಿದ ಸಚಿನ್ ದಾಸ್ ಕಿರಿಯರ ತಂಡದ ಫಿನಿಶರ್ ಆಗಿ ಗಮನಸೆಳೆದಿದ್ದಾರೆ. ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಸಚಿನ್ ದಾಸ್ ಅವರ ತಾಯಿ ಸುರೇಖಾಗೆ ಮಗ ಕ್ರಿಕೆಟರ್ ಆಗುವುದು ಇಷ್ಟವಿರರಿಲ್ಲ ಎಂದೂ ಸಂಜಯ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net