

ನವದೆಹಲಿ: ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ ಎಂದು ಆನ್ಲೈನ್ ಪೀಠೋಪಕರಣ ಕಂಪನಿಯಾದ ವೇಫೇರ್ನ ಇಂಡಿಯನ್ ಅಮೆರಿಕನ್ ಸಿಇಒ ನಿರಜ್ ಶಾ ಉದ್ಯೋಗಿಗಳಿಗೆ ಎಚ್ಚರಿಸಿದ್ದು, ಇದು ಸಂಚಲನ ಸೃಷ್ಟಿಸಿದೆ.
ಬ್ಯುಸಿನೆಸ್ ಇನ್ಸೈಡರ್ನಿಂದ ಪಡೆದ ಇಮೇಲ್ನಲ್ಲಿ, "ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವುದು, ಸ್ಪಂದಿಸುವುದು, ಕೆಲಸ ಮತ್ತು ಜೀವನವನ್ನು ಸಂಯೋಜಿಸುವುದು, ನಾಚಿಕೆಪಡುವ ಸಂಗತಿಯಲ್ಲ" ಎಂದು ಷಾ ತನ್ನ ಸುಮಾರು 15,000 ಉದ್ಯೋಗಿಗಳಿಗೆ ಹೇಳಿದರು.
"ಸೋಮಾರಿತನವು ಯಶಸ್ಸಿನೊಂದಿಗೆ ಬಹುಮಾನ ಪಡೆದ ಇತಿಹಾಸವಿಲ್ಲ. ಸಿಬ್ಬಂದಿ ತಡವಾಗಿ ಕೆಲಸ ಮಾಡಬಾರದು ಎಂಬ ಕಲ್ಪನೆಯು "ನಗುವಷ್ಟು ಸುಳ್ಳು" ಎಂದು ಹೇಳಿದರು.
"ಪ್ರತಿಯೊಬ್ಬರೂ ಉತ್ತಮ ವೈಯಕ್ತಿಕ ಜೀವನವನ್ನು ಹೊಂದಲು ಅರ್ಹರು. ಅದನ್ನು ತಮ್ಮದೇ ಆದ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಇದರ ಹೊರತಾಗಿ ಮಹತ್ವಾಕಾಂಕ್ಷೆಯ ಜನರು ಎರಡನ್ನೂ ಮಿಶ್ರಣ ಮಾಡಲು ಮತ್ತು ಸಮತೋಲನಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ"
ಉದ್ಯೋಗಿಗಳು ಖಾಸಗಿ ಜೀವನಕ್ಕೆ ಸಮಯ ಮೀಸಲಿಡಬೇಕೆಂದು ಒತ್ತಾಯಿಸುತ್ತಿರುವಾಗ, ಶಾ ಕಂಪೆನಿ ಕೆಲಸಕ್ಕೆ ಹೆಚ್ಚು ಸಮಯ ಮೀಸಲಿಡಿ, ಕಂಪೆನಿಯ ಬಿಡಿಗಾಸನ್ನು ಖರ್ಚು ಮಾಡುವಾಗ ಎಚ್ಚರಿಕೆ ವಹಿಸುವಂತೆ ಉದ್ಯೋಗಿಗಳನ್ನು ಕೇಳಿದರು.
"ನೀವು ಖರ್ಚು ಮಾಡುವ ಯಾವುದೇ ಕಂಪೆನಿಯ ಹಣವನ್ನು ನಿಮ್ಮದೇ ಎಂದು ಯೋಚಿಸಿ. ಯಾವ ವಿಷಯಕ್ಕೆ, ನೀವು ಎಷ್ಟು ಹಣವನ್ನು ಖರ್ಚು ಮಾಡುತ್ತೀರಿ?, ಆ ಬೆಲೆ ಸಮಂಜಸವಾಗಿದೆಯೇ? ಕೊನೆಯದಾಗಿ ಖರ್ಚು ಮಾಡುವ ಹನದ ಬಗ್ಗೆ ಕಂಪೆನಿ ಜತೆ ಮಾತುಕತೆ ಮಾಡಿದ್ದೀರಾ?" ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ವರ್ಷ ಫೋರ್ಬ್ಸ್ನ ಬಿಲಿಯನೇರ್ಗಳ ಪಟ್ಟಿಯಿಂದ ಕೈಬಿಟ್ಟ ಭಾರತೀಯ-ಅಮೆರಿಕನ್ ಉದ್ಯಮಿ ಶಾ ಅವರು ಈ ರೀತಿಯ ಹೇಳಿಕೆ ಉದ್ಯೋಗಿಗಳಲ್ಲಿ ಸಂಚಲನ ಸೃಷ್ಠಿಸಿದೆ.
ವಾರಕ್ಕೆ 70 ಗಂಟೆ ಕಾಲ ಕೆಲಸ ಮಾಡಬೇಕು ಎನ್ನುವ ಮೂಲಕ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಮತ್ತೆ ಅಂಥದ್ದೇ ವಾದವನ್ನು ನಿರಜ್ ಶಾ ಪ್ರತಿಪಾದಿಸಿದ್ದಾರೆ.