VIDEO: ಲಾರ್ಡ್ಸ್​ ಅಂಗಳದಲ್ಲಿ ನಾಟ್​ವೆಸ್ಟ್​ ಸರಣಿ ವಿಕ್ರಮಕ್ಕೆ 18ರ ನೆನಪು.....

natwest series for web
Published on

ಬೆಂಗಳೂರು: ಕ್ರಿಕೆಟ್​ ಅಂದರೆ ಹಾಗೆ, ಇತರ ಕ್ರೀಡೆಗಳಿಗೆ ಹೋಲಿಸಿದರೆ ಕೊಂಚ ವಿಭಿನ್ನ. ಒಂದೇ ಎಸೆತ, ಬೌಂಡರಿ, ಸಿಕ್ಸರ್​ನಲ್ಲೂ ಪಂದ್ಯದ ಭವಿಷ್ಯ ಅಡಗಿರುತ್ತದೆ. ಅಂತಿಮ ಕ್ಷಣದವರೆಗೂ ಫಲಿತಾಂಶಕ್ಕೆ ಕಾಯುಸುತ್ತದೆ ಈ ಕ್ರಿಕೆಟ್​. ಇದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. 2002ರ ನಾಟ್​ವೆಸ್ಟ್​ ಏಕದಿನ ಸರಣಿಯ ಫೈನಲ್​ ಪಂದ್ಯ ಇನ್ನು ಭಾರತೀಯರ ಪಾಲಿನಲ್ಲಿ ಅಚ್ಚ ಹಸಿರಾಗಿ ಉಳಿದಿದೆ. ಸೋಲಿನ ಸ್ಥಿತಿಯಲ್ಲಿದ್ದ ಭಾರತ, ಅಂತಿಮವಾಗಿ ಯುವ ಪ್ರತಿಭೆಗಳಾದ ಮೊಹಮದ್​ ಕೈಫ್​ ಹಾಗೂ ಯುವರಾಜ್​ ಸಿಂಗ್​ ಕೆಚ್ಚೆದೆಯ ಹೋರಾಟ ಫಲವಾಗಿ ಸರಣಿ ಒಲಿಸಿಕೊಂಡಿತು. ಅದಕ್ಕಿಂತ ಹೆಚ್ಚಾಗಿ ಭಾರತದ ತಂಡದ ನಾಯಕರಾಗಿದ್ದ ಸೌರವ್​ ಗಂಗೂಲಿ, ಲಾರ್ಡ್ಸ್​ ಪೆವಿಲಿಯನ್​ನಲ್ಲೇ ಜೆರ್ಸಿ ಬಿಚ್ಚಿ ಸಂಭ್ರಮಿಸಿದ್ದನ್ನು ಕ್ರಿಕೆಟ್​ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಈ ಸುಮಧುರ ನೆನಪಿಗೆ ಇಂದಿಗೆ (ಜುಲೈ 13) ಭರ್ತಿ 18 ವರ್ಷ.

2000ರ ಮ್ಯಾಚ್​ ಫಿಕ್ಸಿಂಗ್​ ಪ್ರಕರಣದಿಂದ ಹೊರಬಂದಿದ್ದ ಟೀಮ್​ ಇಂಡಿಯಾ ಸೌರವ್​ ಗಂಗೂಲಿ ಸಾರಥ್ಯದಲ್ಲಿ ಮಿಂಚಿನ ನಿರ್ವಹಣೆ ತೋರುತ್ತಿದ್ದ ಕಾಲವದು. ಬಹುತೇಕ ಯುವ ಆಟಗಾರರಿಂದಲೇ ಕೂಡಿದ್ದ ಟೀಮ್​ ಇಂಡಿಯಾಗೆ 2002ರ ನಾಟ್​ವೆಸ್ಟ್​ ಸರಣಿ ಗೆಲುವು ಸಾಕಷ್ಟು ಹೆಸರು ತಂದುಕೊಟ್ಟಿತು. ನಾಯಕತ್ವದಲ್ಲಿ ಗಂಗೂಲಿ ಸಮರ್ಥವಾದ ವ್ಯಕ್ತಿ ಎಂದು ನಿರೂಪಿಸಿತು.

ಪಂದ್ಯ ಸಾಗಿದ್ದು ಹೀಗೆ...

ಭಾರತ, ಆತಿಥೇಯ ಇಂಗ್ಲೆಂಡ್​ ಹಾಗೂ ಶ್ರೀಲಂಕಾ ಒಳಗೊಂಡ ತ್ರಿಕೋನ ಏಕದಿನ ಸರಣಿಯೇ ನಾಟ್​ವೆಸ್ಟ್​. ಅಂತಿಮವಾಗಿ ಭಾರತ-ಇಂಗ್ಲೆಂಡ್​ ಫೈನಲ್​ ಪ್ರವೇಶಿಸಿದವು. ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ತಂಡ 5 ವಿಕೆಟ್​ಗೆ 325 ರನ್​ ಕಲೆಹಾಕಿತು. ಈ ಬೃಹತ್​ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ವೀರೇಂದ್ರ ಸೆಹ್ವಾಗ್​ (45ರನ್​, 49 ಎಸೆತ, 7 ಬೌಂಡರಿ) ಹಾಗೂ ನಾಯಕ ಸೌರವ್​ ಗಂಗೂಲಿ (60ರನ್​, 43 ಎಸೆತ, 10 ಬೌಂಡರಿ, 1 ಸಿಕ್ಸರ್​) ಜೋಡಿ ಮೊದಲ ವಿಕೆಟ್ ಗೆ 87 ಎಸೆತಗಳಲ್ಲಿ 106 ರನ್ ಕಲೆಹಾಕಿತು. ಈ ಜೋಡಿ ನಿರ್ಗಮನದ ಬಳಿಕ ದಿನೇಶ್​ ಮೊಂಗಿಯಾ (9), ಸಚಿನ್​ ತೆಂಡುಲ್ಕರ್​ (14), ರಾಹುಲ್​ ದ್ರಾವಿಡ್​ (5) ಪೆವಿಲಿಯನ್​ ಪರೇಡ್​ ನಡೆಸಿದರು. ಇದರಿಂದ 146 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡ ಭಾರತ ಸೋಲಿನತ್ತ ಮುಖಮಾಡಿತು. ಭಾರತದ ಈ ಸಂಕಷ್ಟದ ಸ್ಥಿತಿ ಕಂಡ ಹಲವು ಮಂದಿ ಇಂಗ್ಲೆಂಡ್​ ಗೆದ್ದಾಯಿತು ಎಂದು ನಿರೀಕ್ಷಿಸಿದವರೇ ಜಾಸ್ತಿ.

ಯುವಿ-ಕೈಫ್​ ಕಮಾಲ್​

ದಿಗ್ಗಜರೇ ಪೆವಿಲಿಯನ್​ ಸೇರಿದ ಮೇಲೆ ಯುವಕರಿಗೆ ಈ ಪಂದ್ಯ ಗೆಲ್ಲಲು ಸಾಧ್ಯವೇ ಎಂದು ಎಣಿಸಿದ್ದ ಕ್ರೀಡಾಭಿಮಾನಿಗಳ

ಲೆಕ್ಕಾಚಾರವನ್ನು ಬುಡಮೇಲು ಮಾಡಿತು ಯುವರಾಜ್​ ಸಿಂಗ್​ (69) ಹಾಗೂ ಮೊಹಮದ್ ಕೈಫ್ (ಅಜೇಯ 87) ಜೋಡಿ. ವಿಕೆಟ್​ ಕಾಯ್ದುಕೊಂಡು, ಮಂದಗತಿಯಲ್ಲಿ ರನ್​ ಹಿಗ್ಗಿಸಿದ ಈ ಜೋಡಿ ಭಾರತದ ಪಾಳಯದಲ್ಲಿ ಗೆಲುವಿನ ಕನಸು ಚಿಗುರಿಸಿತು. ಈ ಜೋಡಿ 6ನೇ ವಿಕೆಟ್​ಗೆ ಉಪಯುಕ್ತ 121 ರನ್​ ಕಲೆಹಾಕಿತು. ಈ ವೇಳೆ ಯುವರಾಜ್​ ಸಿಂಗ್​, ಕಾಲ್ಲಿಂಗ್ ವುಡ್ ಎಸೆತದಲ್ಲಿ ಔಟಾದರು. ಬಳಿಕ ಏಕಾಂಗಿ ನಿರ್ವಹಣೆ ತೋರಿದ ಕೈಫ್​, ಹರ್ಭಜನ್​ ಸಿಂಗ್​ (15) ಜತೆಗೂಡಿ 7ನೇ ವಿಕೆಟ್​ಗೆ 47 ರನ್​ ಪೇರಿಸಿದರು. ಹರ್ಭಜನ್​ ಹಾಗೂ ಅನಿಲ್​ ಕುಂಬ್ಳೆ (0) ಪ್ಲಿಂಟಾಫ್​ಗೆ ವಿಕೆಟ್​ ನೀಡಿದರು. ಅಂತಿಮ ಕ್ಷಣದವರೆಗೂ ಕ್ರೀಸ್​ನಲ್ಲಿ ಉಳಿದ ಕೈಫ್​, ಜಹೀರ್​ ಜತೆಗೂಡಿ ತಂಡಕ್ಕೆ ಗೆಲುವಿನ ರನ್​ ಕಸಿದರು. 49.3 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡ ಭಾರತ 326 ರನ್​ ಗಳಿಸಿ ಜಯದ ನಗೆ ಬೀರಿತು.

ಜೆರ್ಸಿ ಬಿಚ್ಚಿ ಸಂಭ್ರಮಿಸಿದ ದಾದಾ

ಕೈಫ್- ಜಹೀರ್ ಜೋಡಿ ಗೆಲುವಿನ ರನ್​ ಓಡಿದ್ದೆ ತಡ ನಾಯಕ ಸೌರವ್​ ಗಂಗೂಲಿ ಪೆವಿಲಿಯನ್​ನಲ್ಲಿ ನಿಂತು ಜೆರ್ಸಿ ಬಿಚ್ಚಿ ಸಂಭ್ರಮಿಸಿದರು. ಮೈದಾನಕ್ಕೆ ಓಡಿ ಬಂದು ಕೈಫ್​ ಅವರನ್ನು ಮುದ್ದಾಡಿದರು. ಈ ಸರಣಿಗೂ 4 ತಿಂಗಳ ಮುಂಚೆ ಭಾರತಕ್ಕೆ ಆಗಮಿಸಿದ್ದ ಇಂಗ್ಲೆಂಡ್​ 6 ಪಂದ್ಯಗಳ ಸರಣಿಯ ಕೊನೇ ಪಂದ್ಯದಲ್ಲಿ ಜಯದಾಖಲಿಸಿ 3-3 ರಿಂದ ಸಮಬಲ ಸಾಧಿಸಿತ್ತು. ಪಂದ್ಯ ಗೆದ್ದ ಬಳಿಕ ಇಂಗ್ಲೆಂಡ್​ ಆಲ್ರೌಂಡರ್​ ಪ್ಲಿಂಟಾಫ್​ ಕೂಡ ಮೈದಾನದಲ್ಲೆ ಜೆರ್ಸಿ ಬಿಚ್ಚಿದ್ದರು. ದಾದಾ ಲಾರ್ಡ್ಸ್​ನಲ್ಲೆ ಪ್ರತಿಕಾರ ತೀರಿಸಿಕೊಂಡಿದ್ದು ಇತಿಹಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net