ಭಾರತ ಮಹಿಳಾ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ರದ್ದು

wtm
Published on

ನವದೆಹಲಿ: ಕರೊನಾ ಹಾವಳಿಯಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗೆ ಅಡಚಣೆಯಾಗುವುದು ಮತ್ತಷ್ಟು ಮುಂದುವರಿದಿದ್ದು, ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಪ್ರವಾಸವೊಂದು ರದ್ದಾಗಿದೆ. ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡು ತ್ರಿಕೋನ ಸರಣಿಯಲ್ಲಿ ಆಡುವ ಯೋಜನೆಯನ್ನು ಬಿಸಿಸಿಐ ಕೈಬಿಟ್ಟಿದೆ. ಭಾರತದಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.

‘ಕೋವಿಡ್-19 ಪರಿಸ್ಥಿತಿ ಈಗ ದೇಶದಲ್ಲಿ ಮತ್ತಷ್ಟು ಕಳವಳಕಾರಿಯಾಗಿದೆ. ಹೀಗಾಗಿ ನಮಗೆ ಬೇರೆ ದಾರಿ ಇಲ್ಲದೆ ಭಾರತ ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೂ ಕಳೆದ ವಾರ ತಿಳಿಸಿದ್ದೇವೆ. ಹಾಲಿ ಪರಿಸ್ಥಿತಿಯಲ್ಲಿ ನಾವು ಯಾವುದೇ ಶಿಬಿರವನ್ನು ಆಯೋಜಿಸಲು ಸಾಧ್ಯವಾಗದು. ಇಂಗ್ಲೆಂಡ್‌ನಲ್ಲೂ ಶಿಬಿರ ಏರ್ಪಡಿಸುವುದು ಕಷ್ಟಕರ. ಯಾಕೆಂದರೆ ಲಂಡನ್‌ಗೆ ತೆರಳಲು ಯಾವುದೇ ವಿಮಾನಗಳ ಲಭ್ಯತೆಯ ಬಗ್ಗೆಯೂ ಸ್ಪಷ್ಟತೆ ಇಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ನಾವು ಭಾರತದ ಪುರುಷರ ತಂಡದ ಶ್ರೀಲಂಕಾ, ಜಿಂಬಾಬ್ವೆ ಪ್ರವಾಸವನ್ನು ರದ್ದುಗೊಳಿಸಿದ್ದೇವೆ. ಏಷ್ಯಾಕಪ್ ಕೂಡ ರದ್ದುಗೊಂಡಿದೆ. ಈ ಸಮಯದಲ್ಲಿ ಎಲ್ಲರಿಗೂ ಕಷ್ಟವಿದೆ. ನಾವು ಸ್ವಲ್ಪ ತಾಳ್ಮೆಯಿಂದ ಕಾಯುವುದು ಅಗತ್ಯ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂದಿನ ವರ್ಷದ ಮಹಿಳೆಯರ ಏಕದಿನ ವಿಶ್ವಕಪ್‌ಗೆ ಸಿದ್ಧತೆಯ ಅಂಗವಾಗಿ ಆಯೋಜನೆಗೊಂಡಿದ್ದ ಈ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 3ನೇ ತಂಡವಾಗಿದೆ. 24 ಆಟಗಾರ್ತಿಯರ ಇಂಗ್ಲೆಂಡ್ ತಂಡ ಕಳೆದ 4 ವಾರಗಳಿಂದ ಟೂರ್ನಿಗಾಗಿ ಅಭ್ಯಾಸವನ್ನೂ ನಡೆಸುತ್ತಿದೆ. ಭಾರತ ತಂಡ ಹಿಂದೆ ಸರಿದಿರುವುದರಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈಗ ತ್ರಿಕೋನ ಸರಣಿಗೆ ಬದಲಾಗಿ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಪಕ್ಷೀಯ ಸರಣಿ ಆಡುವ ನಿರೀಕ್ಷೆ ಇದೆ.

ಮಹಿಳೆಯರ ರಾಷ್ಟ್ರೀಯ ಆಯ್ಕೆ ಸಮಿತಿಗೆ ಹೊಸ ಸದಸ್ಯರ ನೇಮಕ ಇನ್ನಷ್ಟೇ ಆಗಬೇಕಾಗಿದೆ. ಇದು ನಮ್ಮ ಕೆಲಸವನ್ನು ಮತ್ತಷ್ಟು ಕಠಿಣಗೊಳಿಸಿದೆ. ಖಾಲಿಯಾಗಿರುವ 5 ಆಯ್ಕೆಗಾರರ ಸ್ಥಾನಗಳಿಗೆ ಜನವರಿಯಲ್ಲೇ ಅರ್ಜಿ ಆಹ್ವಾನಿಸಲಾಗಿದೆ. ಆದರೆ ನಂತರ ಪ್ರಕ್ರಿಯೆಯನ್ನು ಮುಂದುವರಿಸಲಾಗಿಲ್ಲ. ಲಾಕ್‌ಡೌನ್‌ನಿಂದಾಗಿ ನಂತರ ಎಲ್ಲ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದು ಬಿಸಿಸಿಐ ಮೂಲಗಳು ವಿವರಿಸಿವೆ. ಹೇಮಲತಾ ಕಲಾ ನೇತೃತ್ವದ ಹಿಂದಿನ ಆಯ್ಕೆ ಸಮಿತಿಯ ಅವಧಿ, ಈ ವರ್ಷದ ಮಹಿಳೆಯ ಟಿ20 ವಿಶ್ವಕಪ್‌ಗೆ ತಂಡ ಆಯ್ಕೆ ಮಾಡಿದ ಬಳಿಕ ಕೊನೆಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net