ಚೊಚ್ಚಲ ವಿಶ್ವಕಪ್​ ಗೆದ್ದ ಭಾರತ ಮಹಿಳಾ ತಂಡ! ವೀರ ವನಿತೆಯರಿಗೆ ದೇಶಾದ್ಯಂತ ಬಹುಪರಾಕ್​ | IND vs SA Final

Untitled design (6)
Published on

IND vs SA Final: ಇಂದು (ನ.02) ನವಿ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ 52 ರನ್​ಗಳಿಂದ ಗೆದ್ದ ಹರ್ಮನ್​ಪ್ರೀತ್ ಕೌರ್​ ಪಡೆ, ಚೊಚ್ಚಲ ವಿಶ್ವಕಪ್​ ಟ್ರೋಫಿಗೆ ಮುತ್ತಿಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರು, ಹರ್ಮನ್​ಪ್ರೀತ್ ಕೌರ್​ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. 50 ಓವರ್​ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ ಭಾರತ 298 ರನ್​ ಕಲೆಹಾಕಿತು. ತಂಡದ ಪರ ಬ್ಯಾಟರ್​ಗಳಾದ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಉತ್ತಮ ಬ್ಯಾಟಿಂಗ್ ಕೊಡುಗೆ ನೀಡಿದರು. ಈ ಬೃಹತ್ ರನ್​ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕಕ್ಕೆ ಆರಂಭಿಕ ಬ್ಯಾಟ್ಸ್​ವುಮನ್​ ಲೌರಾ ವೋಲ್ವಾರ್ಡಟ್ (101 ರನ್​)​ ಅವರ ಶತಕದಾಟ ಬಿಟ್ಟರೆ ಇನ್ಯಾರ ಪ್ರದರ್ಶನವೂ ಸಾಥ್ ನೀಡಲಿಲ್ಲ. ಇದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು.

ದೀಪ್ತಿ ಶರ್ಮಾ ಕಮಾಲ್​

ಇನ್ನು ಭಾರತ ಪರ ಬೌಲಿಂಗ್​ನಲ್ಲಿಯೂ ಕಮಾಲ್ ಮಾಡಿದ ದೀಪ್ತಿ ಶರ್ಮಾ 5 ವಿಕೆಟ್​ ಕಬಳಿಸಿದರೆ, ಶೆಫಾಲಿ ವರ್ಮಾ 2 ವಿಕೆಟ್​ ಮತ್ತು ನಲ್ಲಾಪುರೆಡ್ಡಿ ಚರಣಿ 1 ವಿಕೆಟ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶೆಫಾಲಿ, ದೀಪ್ತಿ ಬ್ಯಾಟಿಂಗ್ ಗತ್ತು

ಆರಂಭದಲ್ಲಿ ಬ್ಯಾಟ್ ಮಾಡಿದ ಭಾರತಕ್ಕೆ, ಸ್ಮೃತಿ ಮಂಧಾನ (58 ಎಸೆತಕ್ಕೆ 45 ರನ್​) ಮತ್ತು ಶೆಫಾಲಿ (78 ಎಸೆತ, 87 ರನ್​) ಅವರ ಇನ್ನಿಂಗ್ಸ್​ ತಂಡದ ಬೃಹತ್​ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು. ನಂತರದಲ್ಲಿ ಕ್ರೀಸ್​ಗಿಳಿದ ದೀಪ್ತಿ ಶರ್ಮಾ (58 ಎಸೆತ, 58 ರನ್​) ಅದ್ಭುತ ರನ್ ಕೊಡುಗೆ ನೀಡುವ ಮೂಲಕ ತಂಡದ ಒಟ್ಟು ಮೊತ್ತವನ್ನು 250ರ ಗಡಿದಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net