

ನ್ಯೂಯಾರ್ಕ್: ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸೋಮವಾರ (ಅಕ್ಟೋಬರ್,20) ಹೊಸ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ತೈಲ ಖರೀದಿ ಹೀಗೆ ಮುಂದುವರೆದರೆ ಭಾರತ ಭಾರಿ ಸುಂಕ ಪಾವತಿಸಬೇಕಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಶೀಘ್ರದಲ್ಲೇ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ನಾನು ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಮೋದಿ ರಷ್ಯಾದ ತೈಲ ವ್ಯವಹಾರವನ್ನು ಮಾಡುವುದಿಲ್ಲ ಎಂದು ನನಗೆ ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ಭಾರತ ರಷ್ಯಾ ತೈಲ ಖರೀದಿಸಲು ಬಯಸಿದರೆ ಬೃಹತ್ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತದ ರಷ್ಯಾದ ತೈಲ ಖರೀದಿ ಮತ್ತು ಪ್ರಧಾನಿ ಮೋದಿಯ ಭರವಸೆಯ ಬಗ್ಗೆ ಟ್ರಂಪ್ ಈ ರೀತಿ ಪ್ರತಿಪಾದಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಅಲ್ಲದೆ, ಟ್ರಂಪ್ ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ್ದಾರೆ. ಇದರಿಂದಾಗಿ ಒಟ್ಟು ಸುಂಕಗಳು ಶೇ.50 ಕ್ಕೆ ತಲುಪಿದೆ. ಭಾರತವು ಸುಂಕಗಳನ್ನು ಅನ್ಯಾಯ ಎಂದು ಕರೆದಿದ್ದರೂ, ಟ್ರಂಪ್ ಆಡಳಿತವು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಟ್ರಂಪ್ ಹೇಳಿಕೆಯನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರಿಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯ (ಎಂಇಎ), ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ಸಂಭಾಷಣೆ ನಡೆದಿರುವ ಬಗ್ಗೆ ತನಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತದ ರಷ್ಯಾದ ತೈಲ ಖರೀದಿಯ ಬಗ್ಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ತನ್ನ ಆದ್ಯತೆಯಾಗಿದೆ ಎಂದು ಸರ್ಕಾರ ನಿರಂತರವಾಗಿ ಹೇಳಿಕೊಂಡಿದೆ. ಅಲ್ಲದೆ, ಸ್ಥಿರ ಇಂಧನ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಅವಳಿ ಗುರಿಗಳಾಗಿವೆ ಎಂದು ತಿಳಿಸಿದ್ದಾರೆ.
ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ಈ ಕ್ರಮವು ಇಡೀ ಪಶ್ಚಿಮವನ್ನು ಕೆರಳಿಸಿದೆ. ಕೆಪ್ಲರ್ ಪ್ರಕಾರ, ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಶೇಕಡಾ 34 ರಷ್ಟು ಭಾಗವನ್ನು ರಷ್ಯಾ ಹೊಂದಿದೆ. (ಏಜೆನ್ಸೀಸ್)