

ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಇತ್ತೀಚಿನ ಬೆದರಿಕೆಗಳ ವಿರುದ್ಧ ಭಾರತ ಇಂದು (ಆ.14) ಕಟುವಾದ ದಾಳಿ ನಡೆಸಿದೆ. ಪದೇ ಪದೇ ಪರಮಾಣು ಬೆದರಿಕೆ ಹಾಕುತ್ತಿರುವ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿರುವ ಭಾರತ, ಮಾತಿನ ಮೇಲೆ ಹಿಡಿತವಿರಲಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮತನಾಡಿದ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್, ಭಾರತದ ವಿರುದ್ಧ ಯಾವುದೇ ದುಸ್ಸಾಹಸದ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಪಾಕಿಸ್ತಾನಕ್ಕೆ ನೇರವಾಗಿ ಎಚ್ಚರಿಸಿದ್ದಾರೆ. ಭಾರತದಿಂದ ಅಸ್ತಿತ್ವದ ಬೆದರಿಕೆ ಎದುರಾದರೆ ಇಸ್ಲಾಮಾಬಾದ್ "ಅರ್ಧ ಜಗತ್ತನ್ನು ನಾಶಪಡಿಸುತ್ತದೆ" ಎಂದು ಮುನೀರ್ ಅಮೆರಿಕ ಭೇಟಿಯ ಸಂದರ್ಭದಲ್ಲಿ ನೀಡಿದ್ದ ಎಚ್ಚರಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸಮರ್ಥಿಸಿಕೊಂಡ ಬಳಿಕ ಈ ಹೇಳಿಕೆ ನೀಡಲಾಗಿದೆ.
ಪಾಕಿಸ್ತಾನದ ನಾಯಕತ್ವದಿಂದ ಭಾರತದ ವಿರುದ್ಧ ಅಜಾಗರೂಕ, ಯುದ್ಧಪ್ರೇಮ ಮತ್ತು ದ್ವೇಷಪೂರಿತ ಹೇಳಿಕೆಗಳು ನಿರಂತರವಾಗಿ ಬರುತ್ತಿವೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ತಮ್ಮ ಸ್ವಂತ ವೈಫಲ್ಯಗಳನ್ನು ಮರೆಮಾಚಲು ಭಾರತ ವಿರೋಧಿ ವಾಕ್ಚಾತುರ್ಯವನ್ನು ಪದೇ ಪದೇ ಪ್ರಚೋದಿಸಲಾಗುತ್ತಿದೆ. ಪಾಕಿಸ್ತಾನ ನಾಯಕತ್ವ ತನ್ನ ಮಾತಿನಮೇಲೆ ಹಿಡಿತವಿಟ್ಟುಕೊಳ್ಳಬೇಕು. ಭಾರತದೊಂದಿಗೆ ಯುದ್ಧಕ್ಕೆ ಸಿದ್ಧ ಎಂದು ಹೇಳುತ್ತಿರುವ ಅಲ್ಲಿನ ಮಿಲಿಟರಿ ಮತ್ತು ರಾಜಕೀಯ ನಾಯಕತ್ವ, ಆಪರೇಷನ್ ಸಿಂಧೂರ್ ಸೇನಾ ಕಾರ್ಯಚರಣೆಯಲ್ಲಿ ತಿಂದಿರುವ ಪೆಟ್ಟನ್ನು ನೆನಪು ಮಾಡಿಕೊಳ್ಳಬೇಕು. ಎಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
(ಏಜೆನ್ಸೀಸ್)
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಭಾರತ ಬಲವಾಗಿ ಪ್ರತಿಕ್ರಿಯಿಸಿದಾಗ ಮೇ ತಿಂಗಳಲ್ಲಿ ಉಂಟಾದ ಮಿಲಿಟರಿ ಬಿಕ್ಕಟ್ಟನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.